ADVERTISEMENT

ಕೊಂಕು ತೆಗೆಯುವ ನೌಕರರಿಗೆ ನೇಣು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 8:20 IST
Last Updated 3 ಏಪ್ರಿಲ್ 2012, 8:20 IST

ತುಮಕೂರು: ವಿನಾಃ ಕಾರಣ ಕಾನೂನಿನ ಕೊಂಕು ತೆಗೆಯುವ ಸರ್ಕಾರಿ ನೌಕರರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು ಎಂದು ಸಂಸದ  ಜಿ.ಎಸ್.ಬಸವರಾಜು ಕಿಡಿಕಾರಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಸರ್ಕಾರದ ನೂತನ ಯೋಜನೆಯಾದ ಸಾರ್ವಜನಿಕ ಸೇವೆಗಳ ಖಾತರಿ `ಸಕಾಲ~ಕ್ಕೆ ಚಾಲನೆ ನೀಡಿ ಮಾತನಾಡಿ, ಮಂತ್ರಿಗಳಿಂದ ಅನುಮೋದನೆ ಸಿಕ್ಕರೂ ಕೆಲವು ದಾಖಲೆಗಳನ್ನು ಸಹಿ ಹಾಕುವಾಗ ಎರಡನೇ ದರ್ಜೆ ಗುಮಾಸ್ತ ಸೇರಿದಂತೆ ಅಧಿಕಾರಿಗಳು ವಿನಾಃ ಕಾರಣ ಕಾನೂನಿನ ಕೊಂಕು ತೆಗೆದು ಯೋಜನೆ ಜಾರಿಯಾಗದಂತೆ ತಡೆಹಿಡಿಯುವ ಪ್ರವೃತ್ತಿ ಹೆಚ್ಚುತ್ತಿದೆ.
 
ಇಂಥ ಸಿಬ್ಬಂದಿ, ಅಧಿಕಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಏರಿಸಬೇಕು ಎಂದರು.
ಸರ್ಕಾರಿ ಕಚೇರಿಗೆ ಬರುವ ಹಳ್ಳಿ ಜನರನ್ನು ಗದರಿ ಅಟ್ಟಲಾಗುತ್ತದೆ. ಇದು ಹೆತ್ತ ತಂದೆ-ತಾಯಿಗೆ ಮಾಡುವ ಅವಮಾನ, ಇದೊಂದು ನಯವಂಚಕತನ, ಮೋಸಗಾರಿಕೆ. ರಾಜಕಾರಣಿಗಳನ್ನು ಅಧಿಕಾರಿಶಾಹಿ ಹೆಚ್ಚಾಗಿ ಬಳಸಿಕೊಂಡು ಸೋಮಾರಿಗಳಾಗಿದ್ದಾರೆ. ಈ ಸೋಮಾರಿತನದ ಜಾಡ್ಯ ದೇಶದೆಲ್ಲೆಡೆ ಇದೆ. ಇದರ ಪರಿಣಾಮವೇ `ಸಕಾಲ~ ಜಾರಿಯಾಗಿದೆ. ಅಧಿಕಾರಿಗಳ ಮನಸ್ಸು ಪರಿವರ್ತನೆಯಾಗದಿದ್ದರೆ ಇಂಥ ಸಾವಿರ `ಸಕಾಲ~ ಒಂದರೂ ಪ್ರಯೋಜನವಿಲ್ಲ ಎಂದು ಹೇಳಿದರು.

ಪ್ರಾಮಾಣಿಕರು, ಮರ್ಯಾದಸ್ಥರು, ಹಗಲು ರಾತ್ರಿ ಕೆಲಸ ಮಾಡುವ ಒಂದಷ್ಟು ಅಧಿಕಾರಿ, ಸಿಬ್ಬಂದಿ ಇಂದಿಗೂ ಇದ್ದಾರೆ. ಆದರೆ ರಾಜಕೀಯ ಪುಢಾರಿಗಳು ಹೇಳಿದ ಕೆಲಸ ಮಾಡದಿದ್ದರೆ ಇವರು ಮೊದಲ ಬಲಿಪಶು ಆಗುವವರು ಎಂದು ವಿಷಾದಿಸಿದರು.

ಒಟ್ಟು ಹನ್ನೊಂದು ಇಲಾಖೆಗಳ 151 ಸೇವೆಗಳು `ಸಕಾಲ~ದ ವ್ಯಾಪ್ತಿಗೆ ಒಳಪಡುತ್ತವೆ. ಪ್ರತಿ ಇಲಾಖೆಗೆ ಅರ್ಜಿ ನೀಡಿ ಅವರಿಂದ ಸ್ವೀಕೃತಿ ತೆಗೆದುಕೊಂಡ ಕ್ಷಣವೇ ಅರ್ಜಿ ಅಂತರ್ಜಾಲದಲ್ಲಿ ದಾಖಲುಗೊಂಡು ರಾಜ್ಯ ಮಟ್ಟದ `ಸಕಾಲ~ ಕೇಂದ್ರದಲ್ಲೂ ದಾಖಲಾಗುತ್ತದೆ.

ಅರ್ಜಿದಾರರನಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ. ಪ್ರತಿ ತಿಂಗಳು ರಾಜ್ಯ ಮಟ್ಟದ ಅಧಿಕಾರಿಗಳು ಯೋಜನೆಯ ಜಾರಿಯ ಕುರಿತು ಮಾಹಿತಿ ಸಂಗ್ರಹಿಸುವರು. ಯಾವ ಇಲಾಖೆಯಲ್ಲಿ ಅರ್ಜಿ ವಿಲೇವಾರಿ ಸಮರ್ಪಕವಾಗಿಲ್ಲ, ಅಂಥ ಇಲಾಖೆ ಮುಖ್ಯಸ್ಥರಿಗೆ ಈ ಸಂಬಂಧ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.

ಶಾಸಕ ಎಸ್.ಶಿವಣ್ಣ, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಮೋಹನ್‌ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ನಗರಸಭೆ ಆಯುಕ್ತೆ ರೋಹಿಣಿ ಸಿಂಧೂರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.