ADVERTISEMENT

ಕೋರ್ಟ್‌ಗೆ ವರದಿ ಸಲ್ಲಿಸುವುದಷ್ಟೇ ನಮ್ಮ ಕೆಲಸ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:35 IST
Last Updated 11 ಅಕ್ಟೋಬರ್ 2011, 8:35 IST

ತುಮಕೂರು: ಗಣಿಗಾರಿಕೆ ವೈಜ್ಞಾನಿಕವಾಗಿ ನಡೆದಿದೆಯೇ? ಅದು ಪರಿಸರದ ಮೇಲೆ ಉಂಟು ಮಾಡಿರುವ ಪರಿಣಾಮ ಏನು ಎಂಬುದನ್ನು ಪರಿಶೀಲಿಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸುವುದಷ್ಟೇ ನಮ್ಮ ಕೆಲಸ. ಮುಂದಿನ ತೀರ್ಮಾನ ನ್ಯಾಯಾಲಯ ಮತ್ತು ಆಡಳಿತಕ್ಕೆ ಬಿಟ್ಟ ವಿಚಾರ ಎಂದು ಸುಪ್ರೀಂಕೋರ್ಟ್ ಸೂಚನೆಯಂತೆ ಜಿಲ್ಲೆಯ ವಿವಿಧ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ ತಜ್ಞರ ತಂಡದ ಮುಖ್ಯಸ್ಥ ಡಾ.ವಿ.ಕೆ.ಬಹುಗುಣ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ಪ್ರದೇಶದಲ್ಲಿ ತಜ್ಞರ  ತಂಡ ಗಮನಿಸಿದ ಅಂಶಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

ಕೋರ್ಟ್ ಸೂಚನೆಯ ಮೇರೆಗೆ ಜಿಲ್ಲೆಗೆ ಬಂದಿರುವ ತಂಡದಲ್ಲಿ ವಿವಿಧ ಕ್ಷೇತ್ರದ ತಜ್ಞರಿದ್ದಾರೆ. ನಾವು ಏನು ಗಮನಿಸಿದ್ದೇವೆ ಎಂಬುದರ ಸಮಗ್ರ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುತ್ತೇವೆ. ಈ ಕುರಿತು ಮಾಧ್ಯಮಗಳೊಂದಿಗೆ ಏನನ್ನೂ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದರು.

ಈ ದೇಶದ ಅತ್ಯಂತ ಪ್ರತಿಷ್ಠಿತ ಏಳು ಸಂಸ್ಥೆಗಳ ತಜ್ಞರಿರುವ ಸಮಿತಿ ವಿವಿಧ ಗಣಿಗಾರಿಕೆ ಪ್ರದೇಶಗಳಲ್ಲಿ ಸುತ್ತಾಡಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಮುಂದಿನ ದಿನಗಳಲ್ಲಿ ನಡೆಯಲಿರುವ ಸೂಕ್ಷ್ಮ ವಿಶ್ಲೇಷಣೆಗೆ (ಮೈಕ್ರೋ ಅನಾಲಿಸಿಸ್) ಸಂಶೋಧನಾ ವಿಧಾನದ ರೂಪುರೇಶೆ ರೂಪಿಸಲಿದೆ. ಇದೇ 16ಕ್ಕೆ ಜಿಲ್ಲೆಗೆ ಭೇಟಿ ನೀಡಲಿರುವ ಇನ್ನೊಂದು ಸಮಿತಿ ಸ್ಯಾಂಪಲ್ ಸರ್ವೆ ವಿಧಾನದಲ್ಲಿ, ಪ್ರಶ್ನಾವಳಿಗಳ ಮೂಲಕ ಜನರಿಂದ ನೇರವಾಗಿ ಸೂಕ್ಷ್ಮ ಮಾಹಿತಿ ಕಲೆ ಹಾಕಲಿದೆ ಎಂದು ತಿಳಿಸಿದರು.

ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 300ಕ್ಕೂ ಹೆಚ್ಚು ಜನ ನಮ್ಮನ್ನು ಭೇಟಿ ಆಗಿದ್ದಾರೆ. ಜನ ಸಲ್ಲಿಸಿರುವ ಮನವಿ ಪತ್ರ ದಾಖಲಿಸಿ ಕೊಂಡಿದ್ದೇವೆ. ಅತ್ಯಂತ ವೃತ್ತಿಪರವಾಗಿ ಮತ್ತು ಪ್ರಾಮಾಣಿಕವಾಗಿ ನಮ್ಮ ತಂಡ ಕೆಲಸ ಮಾಡುತ್ತಿದೆ. ಗಣಿಗಾರಿಕೆಯು ಪರಿಸರದ ಮೇಲೆ ತನ್ಮೂಲಕ ಸಾಮಾಜಿಕ ಪರಿಸ್ಥಿತಿಯ ಮೇಲೆ ಉಂಟು ಮಾಡಿರುವ ಪರಿಣಾಮ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದರು.

ತಂಡದ ಜೊತೆಗೆ ಡಿಸಿ ಸೇರಿದಂತೆ ಹಲವು ಜಿಲ್ಲಾಮಟ್ಟದ ಅಧಿಕಾರಿಗಳಿರುತ್ತಾರೆ. ಕರ್ನಾಟಕ ಮೂಲದ ಇಬ್ಬರು ವಿಜ್ಞಾನಿಗಳಿದ್ದಾರೆ. ಹೀಗಾಗಿ ಸ್ಥಳೀಯರು ಕನ್ನಡದಲ್ಲಿ ಅಹವಾಲು ಸಲ್ಲಿಸಿದರೂ ಅದನ್ನು ದಾಖಲಿಸಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಜಿಲ್ಲೆಯ ಗಣಿಗಾರಿಕೆ ಪ್ರದೇಶ ಬಳ್ಳಾರಿಯಷ್ಟು ಹಾಳಾಗಿಲ್ಲ ಎಂದು ಹೇಳಿದರು.

ಸುಪ್ರೀಂಕೋರ್ಟ್ ನೇಮಿಸಿರುವ ತಂಡ ಜಿಲ್ಲೆಗೆ ಭೇಟಿ ನೀಡಿರುವ ವಿಚಾರ ತಿಳಿದ ಗಣಿ ಮಾಲೀಕರು ಆತುರಾತುರವಾಗಿ ಗಿಡ ನೆಟ್ಟ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಯಾರಿಗೂ ಗಿಡ ನೆಡಲು ಹೇಳಿರಲಿಲ್ಲ. ಗಿಡವನ್ನು ನೋಡಿದ ತಕ್ಷಣ ಅದನ್ನು ನೆಟ್ಟು ಎಷ್ಟು ದಿನವಾಗಿದೆ ಎಂದು ಗುರುತಿಸುವಷ್ಟು ಜ್ಞಾನ ನಮಗಿದೆ ಎಂದರು.

ಗಣಿಗಾರಿಕೆ ನಡೆಸಲು ಸರ್ಕಾರದಿಂದ ಕಂಪೆನಿಗಳು ಅನುಮತಿ ಪಡೆಯುವ ಸಂದರ್ಭದಲ್ಲಿ ಪರಿಸರ ಇಲಾಖೆ ಸೂಚಿಸಿರುವ ಮಾರ್ಗಸೂಚಿಗಳು ಎಷ್ಟರಮಟ್ಟಿಗೆ ಪಾಲನೆಯಾಗಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಮಾರ್ಗಸೂಚಿ ಎಷ್ಟರಮಟ್ಟಿಗೆ ಪಾಲನೆಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾವು ಪ್ರತ್ಯೇಕವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ನುಡಿದರು.

ನಿಮ್ಮ ಸಮಿತಿಯಿಂದ ಜಿಲ್ಲೆಗೆ ನ್ಯಾಯ ಸಿಗಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನ್ಯಾಯದಾನ ನಮ್ಮ ವ್ಯಾಪ್ತಿಯಲ್ಲಿಲ್ಲ. ನಮ್ಮದು ವಿಜ್ಞಾನಿಗಳ ಹಾಗೂ ವಿಷಯತಜ್ಞರ ತಂಡ. ನಾವು ಗಮನಿಸಿದ, ಸಂಗ್ರಹಿಸಿದ ಮಾಹಿತಿಯನ್ನು ಸುಪ್ರಿಂಕೋರ್ಟ್‌ಗೆ ಸಲ್ಲಿಸುತ್ತೇವೆ. ಮುಂದಿನದ್ದು ಕೋರ್ಟ್ ಮತ್ತು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.