ADVERTISEMENT

ಗಮನ ಸೆಳೆದ ಸ್ಟೋನ್ ಸೂಪ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 11:00 IST
Last Updated 7 ಸೆಪ್ಟೆಂಬರ್ 2011, 11:00 IST

ತುಮಕೂರು: ನಗರದ ಮರಳೂರು ಸಿದ್ಧಾರ್ಥ ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ಮಂಗಳವಾರ ನೆದರ್‌ಲ್ಯಾಂಡ್‌ನ ಪ್ರಸಿದ್ಧ ರಂಗ ನಿರ್ದೇಶಕಿ ಎವಲೀಯನ್ ಪುಲನ್ ನಿರ್ದೇಶನದ `ಸ್ಟೋನ್ ಸೂಪ್~ ನಾಟಕ ಪ್ರದರ್ಶನ ಗಮನ ಸೆಳೆಯಿತು.

ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯು `ಶಿಕ್ಷಣದಲ್ಲಿ ರಂಗಭೂಮಿ~ ವಿಷಯವಾಗಿ ಮೂರು ತಿಂಗಳ ಶಿಬಿರವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆಯ್ದ ಶಿಕ್ಷಕರಿಗೆ ನಡೆಸುತ್ತಿದೆ. ಈ ಶಿಬಿರದ ಎರಡನೇ ಹಂತವಾಗಿ ನಗರದ ಅಂಕಿತ ಶಾಲೆ ಮಕ್ಕಳಿಗಾಗಿ ನಾಟಕ ಪ್ರದರ್ಶನ ಮಾಡಲಾಯಿತು. ನಾಟಕ ನೋಡಲು ಶಿಕ್ಷಕರು, ಜನರು, ಚಿಕ್ಕ ಮಕ್ಕಳು ಕಿಕ್ಕಿರಿದು ತುಂಬಿದ್ದರು.

ಪೊಯ್ಲಿ ಸೇನ್ ಗುಪ್ತಾ ಅವರ ನಾಟಕವನ್ನು ಎವಲೀಯನ್ ಪುಲನ್ ರಂಗಕ್ಕೆ ತಂದಿದ್ದಾರೆ. ಕನ್ನಡಕ್ಕೆ ರಾಮನಾಥ ಅನುವಾದಿಸಿದ್ದಾರೆ.

ಶಿಕ್ಷಣದಲ್ಲಿ ರಂಗಭೂಮಿ ಶಿಬಿರವು ಮಕ್ಕಳನ್ನು ಮುಕ್ತವಾಗಿ ಯೋಚಿಸಲು ಪ್ರಚೋದಿಸುವುದಲ್ಲದೆ, ಕಲಿಕೆಯನ್ನು ಸುಲಭಸಾಧ್ಯವಾಗಿಸುವ ನಿಟ್ಟಿನಲ್ಲಿ ಹುಡುಕಾಟ ನಡೆಸುವಲ್ಲಿ ಯಶಸ್ವಿಯಾಗಿದೆ.

ಚಳಿಗಾಲದ ನಡುರಾತ್ರಿಯಲ್ಲಿ ಹಸಿದ 7 ಜನ ಯಾತ್ರಿಕರು ಹಳ್ಳಿಯೊಂದರಲ್ಲಿ ಬೆಚ್ಚನೆಯ ನೆಲೆಯ ಹುಡುಕಾಟ ನಡೆಸುವುದು ಹಾಗೂ ಬಿಸಿ ನೀರು, ಮಾಂತ್ರಿಕ ಕಲ್ಲಿನಿಂದ ಸೂಪ್ ತಯಾರಿಸಲು ನೆಡೆಸುವ ಪರಿಪಾಟ ಆಕರ್ಷಕವಾಗಿತ್ತು. ಆಹಾರಕ್ಕಾಗಿ ಪರಿಪಾಠ ನಡೆಸುವಾಗಲೇ ಅಲ್ಲಿಗೆ ಬರುವ ಸರ್ಕಸ್‌ವೊಂದರ ತಂಡ ಆ ವಾತಾವರಣಕ್ಕೆ ಹೊಸ ಸೊಗಸು ನೀಡುವುದು ನಾಟಕದ ತಿರುಳಾಗಿದೆ.

ಎವಲೀಯನ್ ಮೂಲತಃ ಶಿಕ್ಷಕಿ. ನೆದರ್‌ಲ್ಯಾಂಡ್‌ನ ಪ್ರಮುಖ ಪಪೆಟ್ ಕಲಾವಿದೆ ಕೂಡ ಹೌದು. ಅವರೇ ಕಟ್ಟಿದ `ಮಾಜೇ-90~ ತಂಡದ ಮೂಲಕ ಹಾಲೆಂಡ್, ಬೆಲ್ಜಿಯಂ ದೇಶಗಳಲ್ಲಿ ಸತತ 12 ವರ್ಷ ಕಾಲ ನಾಟಕ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.