ADVERTISEMENT

ಗುಂಡು ತಗುಲಿ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 6:15 IST
Last Updated 28 ಜನವರಿ 2012, 6:15 IST

ತುರುವೇಕೆರೆ: ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟ ಕೇಂದ್ರೀಯ ಮೀಸಲು ಪಡೆ ಯೋಧ ಜಿ.ಆರ್.ಪರಮೇಶ್ವರ್ (50) ಅಂತ್ಯಕ್ರಿಯೆಯನ್ನು ಸೇನಾ ಗೌರವಗಳೊಂದಿಗೆ ಸಾವಿರಾರು ಗ್ರಾಮಸ್ಥರ ಅಶ್ರು ತರ್ಪಣದ ಮಧ್ಯೆ ತಾಲ್ಲೂಕಿನ ಗೊಟ್ಟಿಕೆರೆಯಲ್ಲಿ ಶುಕ್ರವಾರ ಬೆಳಿಗ್ಗೆ ನೆರವೇರಿಸಲಾಯಿತು.

ದಬ್ಬೇಘಟ್ಟ ಹೋಬಳಿ ಗೊಟ್ಟಿಕೆರೆ ಗ್ರಾಮದ ರಾಗಿ ರಂಗಣ್ಣನವರ ಪುತ್ರ ಪರಮೇಶ್ವರ್ ಕೇಂದ್ರೀಯ ಮೀಸಲು ಪಡೆಯ ಯೋಧರಾಗಿ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಪ್ರಸಕ್ತ ಅರುಣಾಚಲ ಪ್ರದೇಶದ ಚಂಚಲಾಡ್ ಸೈನಿಕ ಶಿಬಿರದ ಸಿ20 ಬೆಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬರುವ    ಮಾರ್ಚ್‌ನಲ್ಲಿ ಸ್ವಯಂ ನಿವೃತ್ತಿ ಪಡೆಯಲು ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ದುರದೃಷ್ಟವಶಾತ್ ಜ.25ರಂದು ಎಕೆ.47 ಬಂದೂಕನ್ನು ಸ್ವಚ್ಛಗೊಳಿಸುತ್ತಿರುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಪರಮೇಶ್ವರ್ ಮೃತಪಟ್ಟರು ಎಂದು ಸೇನೆ ಮೂಲಗಳು ತಿಳಿಸಿವೆ.

ಪರಮೇಶ್ವರ್ ಪಾರ್ಥಿವ ಶರೀರವನ್ನು ಗೊಟ್ಟಿಕೆರೆಗೆ ಶುಕ್ರವಾರ ಮುಂಜಾನೆ ತರಲಾಯಿತು. ಮೃತದೇಹ ನೋಡುತ್ತಿದ್ದಂತೆ ಮೃತರ ಪತ್ನಿ ಹೇಮಲತಾ ಹಾಗೂ ಇಬ್ಬರು ಹೆಣ್ಣುಮಕ್ಕಳ ರೋದನ ಮುಗಿಲು ಮುಟ್ಟಿತ್ತು. ಸಾವಿರಾರು ಜನ ಗ್ರಾಮಸ್ಥರು ಯೋಧನ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ಜಿ.ಪಂ ಸದಸ್ಯ ಎ.ಬಿ.ಜಗದೀಶ್, ಎಪಿಎಂಸಿ ಸದಸ್ಯ ಕೊಂಡಜ್ಜಿ ವಿಶ್ವನಾಥ್, ತಾ.ಪಂ.ಉಪಾಧ್ಯಕ್ಷ ಲಕ್ಷ್ಮೀಕಾಂತ್, ತಹಶೀಲ್ದಾರ್ ಟಿ.ಆರ್.ಶೋಭಾ, ಸಿಪಿಐ ತಿರುಮಲಯ್ಯ, ಪಿಎಸ್‌ಐ ಅಜರುದ್ದೀನ್ ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಮಿಲಿಟರಿ ಗೌರವಗಳೊಂದಿಗೆ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.