ADVERTISEMENT

ಗುಬ್ಬಿ ಕೆರೆಗೆ `ಹೇಮೆ' ಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:00 IST
Last Updated 19 ಡಿಸೆಂಬರ್ 2012, 11:00 IST

ತುಮಕೂರು: ಗುಬ್ಬಿ ಕೆರೆಗೆ ಕೂಡಲೇ ಹೇಮಾವತಿ ನೀರು ಬಿಡಬೇಕು ಎಂದು ಒತ್ತಾಯಿಸಿ ಗುಬ್ಬಿ ಸುತ್ತಮುತ್ತಲ ಗ್ರಾಮಸ್ಥರು ಮಂಗಳವಾರ ನಗರದ ಹೇಮಾವತಿ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೇರೂರು ಕೆರೆಯಲ್ಲಿ ಸ್ವಲ್ಪ ನೀರಿದೆ. ಹೇರೂರು ಕೆರೆಗೆ ನೀರು ಬಿಟ್ಟಿರುವುದು ಕೇವಲ ಗುಬ್ಬಿ ಪಟ್ಟಣಕ್ಕಷ್ಟೇ ನೀರು ಸಿಗಲಿದೆ. ಆದರೆ ಗುಬ್ಬಿ ಕೆರೆಗೆ ನೀರು ಬಿಡಬೇಕು. ಈ ಕೆರೆಯಿಂದ ಸುತ್ತಮುತ್ತಲ 25 ಗ್ರಾಮಗಳ ಜನರಿಗೆ ಕುಡಿಯುವ ನೀರು, ದನಕರುಗಳಿಗೆ ನೀರು ಸಿಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆ ವಿಷಯ ತಿಳಿದು ಶಾಸಕ ಎಸ್.ಆರ್.ಶ್ರೀನಿವಾಸ್ ಅವರೊಂದಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಜಿಲ್ಲೆಯ ಎಲ್ಲ ಕೆರೆಗಳಿಗೆ ಅಲ್ಪಸ್ವಲ್ವ ನೀರು ತುಂಬಿಸುವ ಭರವಸೆ ನೀಡಿದರು.

ಬುಧವಾರ ಮುಖ್ಯಮಂತ್ರಿ ಜತೆ ಸಭೆ ನಡೆಯಲಿದ್ದು, ಜಿಲ್ಲೆಯ ಕೆರೆಗಳನ್ನು ಶೇ 25ರಷ್ಟಾದರೂ ತುಂಬಿಸುವಷ್ಟು ನೀರು ಬಿಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಸಚಿವರ ಮಾತುಗಳ ನಡುವೆ ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳನ್ನು ಹೇಳಲು ಮುಂದಾದಾಗ ನಮ್ಮ ಮಾತಿಗೂ ಅವಕಾಶ ನೀಡಲಿಲ್ಲ. ಏನನ್ನಾದರೂ ಹೇಳಬೇಕು ಎಂದು ಹೋದಾಗ ಬಾಯಿ ಮುಚ್ಚಿಸಿದರು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ ದೂರಿದರು.

ಪ್ರತಿಭಟನೆ ನೇತೃತ್ವವನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಶಿಧರ್, ಮುಖಂಡರಾದ ಶಿವಣ್ಣ, ವೀರೇಶ್, ಹೇರೂರು ಗ್ರಾ.ಪಂ. ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷೆ ಎಲ್ಲಮ್ಮ, ಸದಸ್ಯರಾದ ರಮೇಶ್, ರಾಮಸ್ವಾಮಿ, ಕಿಟ್ಟಿ ಮತ್ತಿತರರು ಇದ್ದರು.

ಪ್ರತಿಭಟನೆಯಲ್ಲಿ ಗುಬ್ಬಿ, ಚಿಕ್ಕೋನಹಳ್ಳಿ, ನಡುವಲಪಾಳ್ಯ, ಕಡೇಪಾಳ್ಯ, ಕೋಡಿತೋಟ, ಹಳೆಗುಬ್ಬಿ, ತೊರೆಹಳ್ಳಿ, ಜವರೇಗೌಡನ ಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.