ADVERTISEMENT

ಜೆಡಿಎಸ್ ವರಿಷ್ಠರ ಒಲವು ಯಾರಿಗೆ?

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 8:55 IST
Last Updated 13 ಜನವರಿ 2011, 8:55 IST

ತುಮಕೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಪಕ್ಷದೊಳಗೆ ಆಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ.
ಅಧ್ಯಕ್ಷ ಸ್ಥಾನ ಗಿಟ್ಟಿಸಲು ಪೈಪೋಟಿ ನಡೆಸುತ್ತಿರುವವರ ‘ರೇಸ್’ನಲ್ಲಿ ಡಾ.ಬಿ.ಎನ್.ರವಿ, ಆನಂದರವಿ, ಸಿ.ಆರ್.ಉಮೇಶ್, ಸುಧಾಕರ್‌ಲಾಲ್, ಆರ್.ಸಿ.ಆಂಜಿನಪ್ಪ ಅವರ ಹೆಸರು ಪ್ರಧಾನವಾಗಿ ಕೇಳಿಬರುತ್ತಿದೆ.

ಇನ್ನಷ್ಟು ಆಕಾಂಕ್ಷಿಗಳು ಆಸೆ ಇದ್ದರೂ ಬಹಿರಂಗವಾಗಿ ವ್ಯಕ್ತಪಡಿಸಲಾಗದೆ ಮನಸಿನೊಳಗೆ ಅದುಮಿಟ್ಟಿಕೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಈವರೆಗೂ ಯಾವೊಬ್ಬ ಆಕಾಂಕ್ಷಿಯೂ ತಮಗೊಂದು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿಲ್ಲ. ಜತೆಗೆ ಲಾಬಿ ಮಾಡುತ್ತಿರುವುದು ಕಂಡುಬಂದಿಲ್ಲ. ಹಾಗಾಗಿ ಉಪಾಧ್ಯಕ್ಷರ ಆಯ್ಕೆ ಅಷ್ಟೇನು ಕಷ್ಟವಾಗಲಾರದು. ಆದರೆ, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಸಾಕಷ್ಟು ಪೈಪೋಟಿ ಇದೆ. ಬೇರೆ ವರ್ಗಕ್ಕೆ ಸೇರಿದವರು ಅವಕಾಶ ಕೇಳುತ್ತಿದ್ದಾರೆ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ನಡೆಯುವುದು ಕಷ್ಟ. ಹೈಕಮಾಂಡ್ ನಿರ್ಧಾರವೇ ಅಂತಿಮವಾಗಲಿದೆ ಎಂದು ಜೆಡಿಎಸ್ ಮೂಲಗಳು ಖಚಿತಪಡಿಸಿವೆ.

ಕುಣಿಗಲ್ ತಾಲ್ಲೂಕು ಅಮೃತೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ.ಬಿ.ಎನ್.ರವಿ ಅವರು ಮಾಜಿ ಸಚಿವ ನಾಗರಾಜಯ್ಯ ಪುತ್ರ. ರವಿ ಆಯ್ಕೆಗೆ ಪಕ್ಷದ ಬಹುತೇಕ ಜಿಲ್ಲಾ ಮುಖಂಡರು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಸ್ವತಃ ಡಿ.ನಾಗರಾಜಯ್ಯ ಅವರೇ ವರಿಷ್ಠರ ಮುಂದೆ ತಮ್ಮ ಮಗನಿಗೊಂದು ಅವಕಾಶ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ನಿಂಗಪ್ಪ, ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಸಚಿವ ಬಿ.ಸತ್ಯನಾರಾಯಣ, ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರೂ ಸಹ ಬೆಂಬಲಿಸುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

ಪಕ್ಷವನ್ನು ಸದೃಢವಾಗಿ ಬೆಳೆಸುವ ಉದ್ದೇಶವಿದ್ದು, ಪಕ್ಷಕ್ಕಾಗಿ ಬಹುಕಾಲದಿಂದ ದುಡಿದವರಿಗೆ ಅವಕಾಶ ಕಲ್ಪಿಸುವುದಾದರೆ ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಆನಂದರವಿ ಆಯ್ಕೆ ನ್ಯಾಯಸಮ್ಮತ. ಆನಂದರವಿಗೆ ಇದು ‘ಹ್ಯಾಟ್ರಿಕ್’ ಗೆಲುವು. ಅಲ್ಲದೆ, ಪಕ್ಷಕ್ಕೆ ಅಷ್ಟಾಗಿ ನೆಲೆ ಇಲ್ಲದಂತಾಗಿದ್ದ ತಿಪಟೂರಿನಲ್ಲಿ ಬಿಜೆಪಿಯ ಅಲೆ ನಡುವೆಯೂ ಜೆಡಿಎಸ್‌ಗೆ ಎರಡು ಸ್ಥಾನಗಳು ಒಲಿದಿವೆ. ತಾಲ್ಲೂಕಿನಲ್ಲಿ ಪಕ್ಷದ ಬಲಪಡಿಸಬೇಕೆಂಬ ಚಿಂತನೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿದ್ದರೆ ಆನಂದರವಿ ಆಯ್ಕೆ ಸುಲಭವಾಗುತ್ತದೆ ಎನ್ನುತ್ತಾರೆ ಜೆಡಿಎಸ್ ಯುವ ಮುಖಂಡರೊಬ್ಬರು. ಫಲಿತಾಂಶ ಪ್ರಕಟವಾದ ನಂತರ ಆನಂದರವಿ ಜಿಲ್ಲಾ ನಾಯಕರು ಮತ್ತು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ತಮ್ಮ ಇಂಗಿತ ವ್ಯಕ್ತಪಡಿಸಿ ಬಂದಿದ್ದಾರೆ.

‘ಕೊರಟಗೆರೆ ತಾಲ್ಲೂಕು ಹುಲಿಕುಂಟೆ ಕ್ಷೇತ್ರದ ಸದಸ್ಯ ಪಿ.ಆರ್.ಸುಧಾಕರ್ ಲಾಲ್‌ಗೂ ಇದು ಹ್ಯಾಟ್ರಿಕ್ ಗೆಲುವು. ಜತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಬೇಕಿದ್ದಂತಹವರು. ಆದರೆ, ರಾಜಕೀಯ ಚದುರಂಗದಾಟದಲ್ಲಿ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತು. ಕಳೆದ ಎರಡು ಅವಧಿಯಲ್ಲಿಯೂ ಕ್ಷೇತ್ರಕ್ಕೆ ಕೈಲಾದಮಟ್ಟಿಗೆ ಉತ್ತಮ ಕೆಲಸ ಮಾಡಿಸಿದ್ದಾರೆ. ಸಜ್ಜನ ಎನ್ನುವ ಅಭಿಪ್ರಾಯ ಕೂಡ ಜನರಲ್ಲಿದೆ. ಹಾಗಾಗಿ ಸುಧಾಕರ್ ಕೂಡ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ’ ಎನ್ನುವುದು ಸುಧಾಕರ್ ಆಪ್ತರೊಬ್ಬರ ಅನಿಸಿಕೆ.

ಇನ್ನೂ ಶಿರಾ ತಾಲ್ಲೂಕಿನ ನಾದೂರು ಕ್ಷೇತ್ರದ ಸದಸ್ಯ ಸಿ.ಆರ್.ಉಮೇಶ್ ಅವರ ಹೆಸರು ‘ರೇಸ್’ನಲ್ಲಿ ಸ್ವಲ್ಪ ಮುಂಚೂಣಿಯಲ್ಲೇ ಇದೆ. ಮಾಜಿ ಸಚಿವ ಬಿ.ಸತ್ಯನಾರಾಯಣ ಅವರು ಟಿಕೆಟ್ ನಿರಾಕರಿಸಿದಾಗ, ಜಿಲ್ಲಾ ವರಿಷ್ಠರನ್ನು ಎದುರು ಹಾಕಿಕೊಂಡೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿಗೆ ಹೋಗಿ ‘ಬಿ’ ಫಾರ್ಮ್ ತರುವಲ್ಲಿ ಯಶಸ್ವಿಯಾದರು. ಮಾಜಿ ಸಚಿವರಿಗೆ ಸಡ್ಡುಹೊಡೆದೇ ಗೆದ್ದುಬಂದಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಒಳ್ಳೆಯ ಸಂಪರ್ಕ ಇಟ್ಟುಕೊಂಡಿರುವುದು, ಪಕ್ಷ ಸಂಘಟಿಸುವ ಮತ್ತು ಅಭಿವೃದ್ಧಿಪರ ಚಿಂತನೆ ಇರುವುದನ್ನು ವರಿಷ್ಠರು ಗುರುತಿಸಿದರೆ ಮೊದಲ ಬಾರಿ ಅಖಾಡಕ್ಕಿಳಿದು ಸವಾಲಿನಿಂದ ಗೆದ್ದುಬಂದಿರುವ ಉಮೇಶ್ ಅವರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸುವುದು ಕೂಡ ಸವಾಲು ಆಗಲಾರದು ಎನ್ನುವ ಮಾತು ಪಕ್ಷದ ಪಡಸಾಲೆಯಲ್ಲಿ ಚರ್ಚಿತವಾಗುತ್ತಿದೆ.

ಪಕ್ಷ ಅಧೋಗತಿಗೆ ಹೋಗಿದ್ದ ಪಾವಗಡ ತಾಲ್ಲೂಕಿನಲ್ಲಿ ಈ ಬಾರಿ ಧೂಳಿನಿಂದ ಎದ್ದು ಬಂದ ರೀತಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದುಬಂದಿರುವುದರಿಂದ ವೆಂಕಟಾಪುರ ಕ್ಷೇತ್ರದ ಆರ್.ಸಿ.ಆಂಜಿನಪ್ಪ ಅವರೂ ಸಹ ತಮಗೊಂದು ಅವಕಾಶ ನೀಡುವಂತೆ ಜಿಲ್ಲಾ ಮುಖಂಡರ ಮುಂದೆ ಮನವಿ ಇಟ್ಟಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿಗಳ ಇಷ್ಟೆಲ್ಲ ಲಾಬಿ, ಕಸರತ್ತು ನಡುವೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಾರಿಗೆ ‘ಆಶೀರ್ವಾದ’ ಮಾಡುತ್ತಾರೆನ್ನುವುದು ದಿನದಿನಕ್ಕೂ ಕುತೂಹಲ ಕೆರಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.