ADVERTISEMENT

ಟೆಂಪೊ ಡಿಕ್ಕಿ: ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:15 IST
Last Updated 4 ಜುಲೈ 2012, 5:15 IST

ಕೊರಟಗೆರೆ: ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಟೆಂಪೊ ಹರಿದು ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರಿಗೆ ತೀವ್ರ ಗಾಯಗಳಾಗಿರುವ ಘಟನೆ ಪಟ್ಟಣದಲ್ಲಿ ಸೋಮವಾರ ತಡ ರಾತ್ರಿ 11.30ರ ಸುಮಾರಿನಲ್ಲಿ ನಡೆದಿದೆ.

ಪಟ್ಟಣದ ಎಸ್‌ಸಿ, ಎಸ್‌ಟಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಶೇಷಾ ನಾಯ್ಕ(16) ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿ. ಮತ್ತೊಬ್ಬ ವಿದ್ಯಾರ್ಥಿ ಲಕ್ಷ್ಮಣ ನಾಯ್ಕ, ವಾಚ್‌ಮನ್ ಶಿವಕುಮಾರ್ ಘಟನೆಯಲ್ಲಿ ತೀವ್ರ ಗಾಯಗೊಂಡವರು.

ಶೇಷಾನಾಯ್ಕ ಮೂಲತಃ ಪಾವಗಡ ತಾಲ್ಲೂಕಿನ ನಲ್ಲದಿಗಿಲಬಂಡೆ ಗ್ರಾಮದ ಲೇಟ್ ನಾಗಾನಾಯ್ಕ ಎಂಬುವರ ಮಗನಾಗಿದ್ದು, ಪಟ್ಟಣದ ರವೀಂದ್ರ ಭಾರತಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಶೇಷಾನಾಯ್ಕ ಹಾಗೂ ಲಕ್ಷ್ಮಣ್ ನಾಯ್ಕ ಇಬ್ಬರಿಗೂ ವಾಂತಿ-ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿ 11ಗಂಟೆ ಸುಮಾರಿನಲ್ಲಿ ವಾಚ್‌ಮನ್ ಶಿವಕುಮಾರ್ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಬಂದಿದ್ದರು.

ಚಿಕಿತ್ಸೆ ನಂತರ ರಸ್ತೆ ಬದಿಯಲ್ಲಿ ಹಾಸ್ಟೆಲ್‌ಗೆ ವಾಪಸ್ ನಡೆದುಕೊಂಡು ರಂಗನಾಥ ಪೆಟ್ರೋಲ್ ಬಂಕ್ ಬಳಿ ಹೋಗುವಾಗ ಹಿಂದಿನಿಂದ ಬಂದ ಟೆಂಪೊ ಏಕಾಏಕಿ ಡಿಕ್ಕಿ ಹೊಡೆದಿದ್ದರಿಂದ ಘಟನೆ ಸಂಭವಿಸಿದೆ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಚಾಲಕ ಮಂಜುನಾಯ್ಕನನ್ನು ಬಂಧಿಸಿ, ಟೆಂಪೊ ವಶಕ್ಕೆ ತೆಗೆದುಕೊಳ್ಳಲಾಗಿದೆ. ಶಿವಕುಮಾರ್ ಮತ್ತು ಲಕ್ಷ್ಮಣ್‌ನಾಯ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ವಿ.ಪಾತರಾಜು, ಇನ್ಸ್‌ಪೆಕ್ಟರ್ ಕೆ.ಆರ್.ಚಂದ್ರಶೇಖರ್ ಭೇಟಿ ನೀಡಿದ್ದರು. ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಿಳೆಗೆ ಕಿರುಕುಳ: ಧರ್ಮದೇಟು
ಕುಣಿಗಲ್: ವಿವಾಹಿತ ಮಹಿಳೆಗೆ ಮೊಬೈಲ್ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.

ಪಟ್ಟಣದ ಕುವೆಂಪು ನಗರದ ಮಹಿಳೆಯೊಬ್ಬರಿಗೆ ಮೂಡಬಿದಿರೆ ಸಮೀಪದ ಕಿರಣ್‌ಕುಮಾರ್ ಎಂಬಾತ ಎರಡು ತಿಂಗಳಿನಿಂದಲೂ ವಿವಿಧ ಕಂಪೆನಿಗಳ ಸಿಮ್‌ಕಾರ್ಡ್ ಬಳಸಿ ಕರೆ ಮಾಡಿ ಅಶ್ಲೀಲ ಪದ ಬಳಸಿ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಆತನನ್ನು ಹಿಡಿಯುವ ಸಲುವಾಗಿ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಬಳಿ ಇರುವುದಾಗಿ ತಿಳಿಸಿ ಕರೆಸಿಕೊಂಡು ತೀವ್ರ ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ಸಾರ್ವಜನಿಕರು ಆಕ್ರೋಶಗೊಂಡು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಲ್ಲೆ: ಬಂಧನ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಘಟನೆ ನಡೆದಿದೆ.

ಯುವತಿ ಆತ್ಮಹತ್ಯೆ
ಪಾವಗಡ: ವಿಷದ ಮಾತ್ರೆ ನುಂಗಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಜ್ಯೋತಿ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ತಂದೆ ಹೇಳಿದ ಕೆಲಸ ಮಾಡಿಲ್ಲ ಎಂದು ಬೇಸರಗೊಂಡ ಈಕೆ ರಾತ್ರಿ ವಿಷದ ಮಾತ್ರೆ ನುಂಗಿ ದೊಡ್ಡಮ್ಮನ ಮನೆಯಲ್ಲಿ ಮಲಗಿದ್ದಾಳೆ.

ಸ್ವಲ್ಪ ಹೊತ್ತಿನ ಬಳಿಕ ವಾಂತಿ ಹಾಗೂ ಹೊಟ್ಟೆ ಉರಿ ತಾಳದೆ ಒದ್ದಾಡುವುದನ್ನು ಗಮನಿಸಿದ ಮನೆಯವರು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ಈಕೆ ತಂದೆ ಮೈಲಾರಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.