ADVERTISEMENT

ತಿಪಟೂರು: ಮತದಾನಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಮೇ 2018, 7:14 IST
Last Updated 11 ಮೇ 2018, 7:14 IST

ತಿಪಟೂರು: ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಒಟ್ಟು 233 ಮತಗಟ್ಟೆಗಳ ಪೈಕಿ 49 ಸೂಕ್ಷ್ಮ, 52 ಅತಿ ಸೂಕ್ಷ್ಮ, 17 ಅತ್ಯಂತ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಸುಗಮ ಮತದಾನಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೂಕ್ಷ್ಮ ಮತಗಟ್ಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ಯಾರಾ ಮಿಲಿಟರಿ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಕಣ್ಗಾವಲಿ ಗಾಗಿ 10 ಕಡೆ ವೆಬ್ ವಿಡಿಯೊ, 84 ಕಡೆ ವಿಡಿಯೊಗ್ರಾಫರ್, 73 ಮೈಕ್ರೋ ಅಬ್ಸರ್ವರ್‌ಗಳ ವ್ಯವಸ್ಥೆ ಮಾಡಲಾಗುವುದು. ಕಾನೂನು ಸುವ್ಯವಸ್ಥೆ ಸೇರಿದಂತೆ ಯಾವುದೇ ಮತಗಟ್ಟೆಯಲ್ಲಿ ತಾಂತ್ರಿಕ ತೊಂದರೆ ಬಂದರೂ ತಕ್ಷಣ ಸ್ಪಂದಿಸಲು ತುರ್ತು ಸಿಬ್ಬಂದಿ ಇರುತ್ತಾರೆ ಎಂದು ವಿವರಿಸಿದರು.

ಕ್ಷೇತ್ರದಲ್ಲಿ ಒಟ್ಟು 1,81,471 ಮತದಾರರು ಇದ್ದಾರೆ. ಇದರಲ್ಲಿ ಪುರುಷರು 88,923, ಮಹಿಳೆಯರು 92,548 ಇದ್ದಾರೆ. ಈ ಪಟ್ಟಿಯಲ್ಲಿ ಹೊಸದಾಗಿ 2,000 ಮತದಾರರು ಸೇರಿದ್ದಾರೆ. ಸಮರ್ಪಕ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ಹಳೇಪಾಳ್ಯದ ಮತಗಟ್ಟೆ ಸಂಖ್ಯೆ 74ನ್ನು ಮಾದರಿ ಮತಗಟ್ಟೆಯಾಗಿ ರೂಪಿಲಾಗಿದೆ. ಇಲ್ಲಿ ನೀರು, ನೆರಳು, ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮತದಾರರಿಗೆ ದೊರಕಿಿಕೊಡಲಾಗುತ್ತದೆ. ಅದೇ ರೀತಿ ವಿಶೇಷವಾಗಿ ಎರಡು ಕಡೆ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ನಗರಸಭೆ ಕಚೇರಿಯ ಮತಗಟ್ಟೆ ಮತ್ತು ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಮತಗಟ್ಟೆಯನ್ನು ಪಿಂಕ್ ಮತಗಟ್ಟೆಗಳಾಗಿ ರೂಪಿಸಲಾಗಿದೆ. ಇಲ್ಲಿನ ಮತಗಟ್ಟೆಗಳ ಎಲ್ಲ ಅಧಿಕಾರಿಗಳು ಮಹಿಳೆಯರು ಇರುತ್ತಾರೆ. ಮಹಿಳೆಯರನ್ನೇ ಎಲ್ಲ ಸಿಬ್ಬಂದಿಯಾಗಿ ಬಳಸಿಕೊಳ್ಳುವುದು ಈ ಮತಗಟ್ಟೆಗಳ ವಿಶೇಷವಾಗಿದೆ ಎಂದು ವಿವರಿಸಿದರು.

ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಬೆಳಿಗ್ಗೆಯಿಂದ ಮಸ್ಟರಿಂಗ್ ಆರಂಭವಾಗಿದೆ. ಮತಗಟ್ಟೆ ಸಿಬ್ಬಂದಿಯ ಸಂಚಾರಕ್ಕೆ 36 ಬಸ್, 30 ಮಿನಿ ಬಸ್ ಮತ್ತು 19 ಜೀಪ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬೇರೆ ತಾಲ್ಲೂಕುಗಳಲ್ಲಿ ನಿಯೋಜನೆಗೊಂಡಿರುವ ಇಲ್ಲಿನ ನೌಕರರಿಗೆ ಇಲ್ಲಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 6.30ಕ್ಕೆ ಇದೇ ಸ್ಥಳದಿಂದ ಬಸ್‍ಗಳು ಹೊರಡಲಿವೆ. ಯಾವುದೇ ಗೊಂದಲವಾಗದಂತೆ ವಿಶೇಷ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ ಎಂದರು.

ಮತಗಟ್ಟೆಯಲ್ಲಿ ವ್ಯಕ್ತಿಯನ್ನು ಗುರುತಿಸಲು 12 ಬಗೆಯ ಕಾರ್ಡ್‍ಗಳಿಗೆ ಅನುಮತಿ ಇದೆ. ಎಪಿಕ್ ಕಾರ್ಡ್ ಇಲ್ಲದವರು 12ರಲ್ಲಿ ಯಾವುದಾದರೂ ಒಂದನ್ನು ತೋರಿಸಬಹುದು. ಈ ವರ್ಷ ಮೊದಲ ಬಾರಿಗೆ ಮನೆಮನೆಗೆ ಮತದಾರರ ಎಪಿಕ್ ಕಾರ್ಡ್‍ನ ಜೆರಾಕ್ಸ್ ಪ್ರತಿಗಳನ್ನು ವಿತರಿಸಲಾಗಿದೆ. ಅದನ್ನು ತಂದರೂ ಮತದಾನಕ್ಕೆ ಅವಕಾಶವಿದೆ ಎಂದು ತಿಳಿಸಿದರು. ಉಪ ಚುನಾವಣಾಧಿಕಾರಿ ಡಾ. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.