ADVERTISEMENT

ತೆಂಗು ಸೀಮೆಯಲ್ಲಿ ಭರ್ಜರಿ ರೋಡ್‌ ಶೋ

ಕಿಕ್ಕಿರಿದು ಸೇರಿದ್ದ ಜನರತ್ತ ಕೈಬೀಸಿದ ಕಾಂಗ್ರೆಸ್‌ ಮುಖಂಡರು, ಸೆಲ್ಫಿಗಾಗಿ ಮುಗಿಬಿದ್ದ ಯುವಕರ ದಂಡು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 12:09 IST
Last Updated 5 ಏಪ್ರಿಲ್ 2018, 12:09 IST
ರಾಹುಲ್ ಗಾಂಧಿ ಭರ್ಜರಿ ರೋಡ್‌ ಶೋ
ರಾಹುಲ್ ಗಾಂಧಿ ಭರ್ಜರಿ ರೋಡ್‌ ಶೋ   

ತುಮಕೂರು: ತೆಂಗು ಸೀಮೆಯೆಂದೆ ಹೆಸರಾಗಿರುವ ತುಮಕೂರು, ಕುಣಿಗಲ್‌ನಲ್ಲಿ ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರ್ಜರಿ ರೋಡ್‌ ಶೋ ನಡೆಸಿದರು.ರಾಹುಲ್‌ ನೋಡಲು ಸಾವಿರಾರು ಜನರು ಕಿಕ್ಕಿರಿದು ಸೇರಿದ್ದರು.ಜನಾಶೀರ್ವಾದ ಯಾತ್ರೆ ಕಾರಣ ಕಾಂಗ್ರೆಸ್‌ ಕಾರ್ಯಕರ್ತರ ಉತ್ಸಾಹ ಮೇರೆ ಮೀರಿತ್ತು. ಸಿದ್ಧಗಂಗಾ ಮಠದಿಂದ ನೇರ ನಗರದ ಭದ್ರಮ್ಮ ವೃತ್ತಕ್ಕೆ ಯಾತ್ರೆ ಬಂದಿತು.  ಕಾಂಗ್ರೆಸ್‌ ಬಾವುಟ ಹಿಡಿದಿದ್ದ  ನೂರಾರು ಕಾರ್ಯಕರ್ತರು ಉರಿವ ಬಿಸಿಲಲ್ಲೂ ಕಾದು ನಿಂತಿದ್ದರು. ರೋಡ್‌ ಶೋ ವೇಳೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ ನಡೆಸಿದರು. ಕಾರ್ಯಕರ್ತರ ಜೈಕಾರಗಳ ಘೋಷಣೆ ನಡುವೆ ರಾಹುಲ್‌ ಮಾತುಗಳೇ ಕೇಳುತ್ತಿರಲಿಲ್ಲ.ಕಿಕ್ಕಿರಿದು ಸೇರಿದ್ದ ಜನರನ್ನು ಕಂಡು ಪುಳಕಿತರಾದಂತೆ ರಾಹುಲ್‌ ಕಂಡರು. ಕಾಂಗ್ರೆಸ್‌ ಬಡವರ ರಕ್ಷಣೆಗೆ ನಿಂತಿದ್ದರೆ ಮೋದಿ ಭ್ರಷ್ಟರ ರಕ್ಷಣೆಗೆ ನಿಂತಿದ್ದಾರೆ ಎಂದು ಛೇಡಿಸಿದರು.

ವಿಜಯ್‌ ಮಲ್ಯ, ನೀರವ್‌ ಮೋದಿ, ಲಲಿತ್ ಮೋದಿ ಅವರುಗಳ ವಂಚನೆ ಬಗ್ಗೆ ಪ್ರಸ್ತಾಪಿಸಿದರು. ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಮಗಳು, ನೀರವ್‌ ಮೋದಿ ಪರ ವಕಾಲತು ವಹಿಸಿದ್ದಾರೆ. ಇದೆಲ್ಲವೂ ಬಿಜೆಪಿ ಭ್ರಷ್ಟರ ಪರವಾಗಿದೆ ಎನ್ನುವುದಕ್ಕೆ ಉದಾಹರಣೆ ಅಲ್ಲವೇ ಎಂದು ಜನರನ್ನು ಕೇಳಿದರು.ಇಲ್ಲಿಂದ ಗೂಳೂರು, ನಾಗವಲ್ಲಿ, ಹೆಬ್ಬೂರುವರೆಗೂ ರೋಡ್‌ ಶೋ ಇತ್ತು. ಹೆಚ್ಚಿನ ಜನರು ಸೇರಿರಲಿಲ್ಲ.ಘೋಷಿತ ವೇಳಾಪಟ್ಟಿ ಪ್ರಕಾರ ಇಲ್ಲಿ ಎರಡು–ಮೂರು ನಿಮಿಷ ಕಾಲ ಜನರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಇಲ್ಲೆಲ್ಲೂ ಮಾತನಾಡಲಿಲ್ಲ.

ಹೆಬ್ಬೂರಿಗೆ ಯಾತ್ರೆ ಬಂದಾಗ ಬೈಕ್‌ನಲ್ಲಿದ್ದ ಸಂಸದ ಡಿ.ಕೆ.ಸುರೇಶ್‌ ಯಾತ್ರೆಯನ್ನು ಸ್ವಾಗತಿಸಿ ಯಾತ್ರೆ ಮುಂದೆ ಬೈಕ್‌ನಲ್ಲೇ ಸಾಗಿದರು. ಕೊತ್ತಗೆರೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮಗುವನ್ನು ಹೆಗಲ ಮೇಲೆ ಎತ್ತಿ ಹಿಡಿದು ರಾಹುಲ್‌ಗೆ ಕೈ ಕುಲುಕಿಸಿದರು.ಕುಣಿಗಲ್‌ನಲ್ಲಿ ಸಾವಿರಾರು ಜನರು ಸೇರಿದ್ದರು. ಕೆಲವೇ ನಿಮಿಷ ಮಾತ್ರ ಮಾತನಾಡಿದ ರಾಹುಲ್‌, ಇಲ್ಲಿಯೂ ಪ್ರಧಾನಿ ವಿರುದ್ಧ ಮೊನಚು ಮಾತುಗಳಿಂದ ವಾಗ್ದಾಳಿ ನಡೆಸಿದರು.ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿರುವ ಕಾರಣದಿಂದಲೋ ಏನೋ, ’ಜೆಡಿಎಸ್‌ ಬಿಜೆಪಿಯ ಬಿ– ಟೀಂ’ ಎಂದು ಜರಿದರು. ಆದರೆ ಬೇರೇನು ಮಾತನಾಡಲಿಲ್ಲ.

ADVERTISEMENT

ಬಣಗಳ ಸ್ವಾಗತ: ಸಚಿವ ಡಿ.ಕೆ.ಶಿವಕುಮಾರ್‌ ನೆಂಟ ಡಾ.ರಂಗನಾಥ್‌, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಬಣದ ರಾಜಕಾರಣ  ಆರ್ಭಟಿಸಿತು. ಎರಡೂ ಬಣಗಳು ‍ಯಾತ್ರೆ ಬರುವುದಕ್ಕೂ ಮುನ್ನ ಪಟ್ಟಣದಲ್ಲಿ ಪ್ರತ್ಯೇಕ ಮೆರವಣಿಗೆ ನಡೆಸಿದ್ದವು. ರಾಹುಲ್‌ ಮಾತನಾಡುವಾಗ ಮಧ್ಯೆ, ಮಧ್ಯೆ ಅವರವರ ನಾಯಕರ ಫೋಟೊ ಅಂಟಿಸಿಕೊಂಡಿದ್ದ ಹಿಂಬಾಲಕರು ಹಸ್ತ ಚಿಹ್ನೆಯ ಪ್ಲೆ ಕಾರ್ಡ್‌ ಹಿಡಿದು ಜೈಕಾರ ಹಾಕಿದರು.

ಜನರಿಗೆ ಕಿರಿಕಿರಿ

ತುಮಕೂರು:ನಗರದ ಜನರಿಗೆ ಯಾತ್ರೆಯಿಂದಾಗಿ ಸಾಕಷ್ಟು ಕಿರಿ ಕಿರಿ ಉಂಟಾಯಿತು. ಕಂಡಲ್ಲೆಲ್ಲ ಪೊಲೀಸರು, ಅರೆಬರೆ ತೆರೆದ ಅಂಗಡಿ, ಮಳಿಗೆಗಳು, ಕಿಲೋ ಮೀಟರ್ ಗಟ್ಟಲೆ ಬಿಕೊ ಎನ್ನುತ್ತಿದ್ದ ರಸ್ತೆಗಳು ಕಂಡವು. ಒಂದು ರೀತಿಯಲ್ಲಿ ಅಘೋಷಿತ ಕರ್ಫ್ಯೂ ಹೇರಿದಂತೆ ಆಗಿತ್ತು. ನಗರದ ಪ್ರಮುಖ ರಸ್ತೆಯಾದ ಬಿ.ಎಚ್.ರಸ್ತೆಯಲ್ಲಿ ರಾಹುಲ್ ಗಾಂಧಿ ಅವರು ರೋಡ್ ಶೋ ನಡೆಸುವ ಪ್ರಯುಕ್ತ ಈ ರಸ್ತೆಯಲ್ಲಿ ಮಧ್ಯಾಹ್ನ 1ರಿಂದ 5 ಗಂಟೆಯವರೆಗೂ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಈ ರಸ್ತೆಯನ್ನು ಸಂಪರ್ಕಿಸುವ ಒಳ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ನಾಗರಿಕರು ಪರದಾಡಿದರು.ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಿಂದ ಬರುವವರು, ಆಸ್ಪತ್ರೆಗೆ ಹೋಗುವವರು, ವ್ಯಾಪಾರಸ್ಥರು, ಸಾರಿಗೆ ಬಸ್ ಪ್ರಯಾಣಿಕರು ಬಸವಳಿದರು. ಪೊಲೀಸರು ಕಂಡ ಕಂಡಲ್ಲೆಲ್ಲ ವಾಹನಗಳನ್ನು ಗಂಟೆಗಟ್ಟಲೆ ನಿಲ್ಲಿಸಿದರು. ಇದರಿಂದ ಆಕ್ರೋಶಗೊಂಡ ಜನರು ಪೊಲೀಸರ ಕ್ರಮವನ್ನು ಖಂಡಿಸಿದರು.

ಮಠಕ್ಕೆ ಪ್ರವೇಶ ನಿರಾಕರಣೆ: ರಾಹುಲ್ ಭೇಟಿ ಪ್ರಯುಕ್ತ ಭಕ್ತರಿಗೆ ಪೊಲೀಸರು ಪ್ರವೇಶವನ್ನು ನಿರಾಕರಿಸಿದರು. ಮಧ್ಯಾಹ್ನ 12ಗಂಟೆಗೆ ಗೇಟ್ ಬಂದ್ ಮಾಡಿದರು.ಇದರಿಂದ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಪರದಾಡಿದರು. ಸುಡುಬಿಸಿಲಿನಲ್ಲಿ ನಿಂತು ರಾಹುಲ್ ಗಾಂಧಿ ಬಂದು ಹೋಗುವವರೆಗೂ ಕಾಲ ಕಳೆದರು.ಮಠದ ಕಲ್ಯಾಣಮಂಟಪದಲ್ಲಿ ಸಂಜೆ ನಡೆಯಬೇಕಿದ್ದ ಮಾಚಗೊಂಡನಹಳ್ಳಿಯ ನಿವೇದಿತಾ ಮತ್ತು ಸಂತೋಷ್ ಅವರ ಆರತಕ್ಷತೆ ಕಾರ್ಯಕ್ರಮಕ್ಕೂ ತೊಂದರೆಯಾಯಿತು. ಕಾರ್ಯಕ್ರಮಕ್ಕೆ ಬರುತ್ತಿದ್ದ ವಧು–ವರರ ಸಂಬಂಧಿಕರನ್ನು ಪೊಲೀಸರು ತಡೆದರು. ಅಡುಗೆ ಸಿದ್ಧತೆ ಮಾಡಿಕೊಳ್ಳಲು ಸಹ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.