ADVERTISEMENT

ಪೇಟೆಯಲ್ಲಿ ಅಪಾಯಕಾರಿ ಔಷಧಿ:ಆತಂಕ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 10:45 IST
Last Updated 30 ಅಕ್ಟೋಬರ್ 2011, 10:45 IST

ತುಮಕೂರು: `ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಅನಗತ್ಯ ಹಾಗೂ ಅಪಾಯಕಾರಿ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಸಂಬಂಧ ಸರ್ಕಾರ ಸೂಕ್ತ ನೀತಿ ಜಾರಿಗೆ ತರಬೇಕು~ ಎಂದು ವೈದ್ಯ ಸಾಹಿತಿ ಡಾ.ಪ್ರಕಾಶ್ ಸಿ.ರಾವ್ ಇಲ್ಲಿ ಶನಿವಾರ ಒತ್ತಾಯಿಸಿದರು.

ರಾಜ್ಯ ವಿಜ್ಞಾನ ಪರಿಷತ್ತು, ತುಮಕೂರು ವಿಜ್ಞಾನ ಕೇಂದ್ರದ ವತಿಯಿಂದ ಸಿದ್ದಗಂಗಾ ಔಷಧ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ `ಆರೋಗ್ಯದಿಂದ ಜನಾ ರೋಗ್ಯ~ ಕುರಿತಾದ ರಾಜ್ಯಮಟ್ಟದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಕೆಲವೊಂದು ದೇಶದಲ್ಲಿ ಪ್ರಾಣಿಗಳಿಗೂ ಬಳಸದ ಮಾತ್ರೆಗಳನ್ನು ನಮ್ಮ ದೇಶದ ಮಕ್ಕಳ ಮೇಲೆ ಪ್ರಯೋಗಿ ಸುತ್ತಿದ್ದಾರೆ. ಇದು ನಿಲ್ಲಬೇಕಾದರೆ ಜನರಲ್ಲಿ ತಿಳಿವಳಿಕೆ ಮೂಡಬೇಕು. ಜಗತ್ತಿನ ಅತಿ ಚಿಕ್ಕ ರಾಷ್ಟ್ರಗಳಾದ ಸ್ವೀಡನ್, ಲಾವೊಸ್ ಮೊದಲಾದವುಗಳು ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ಆದರೆ ದೇಶದಲ್ಲಿ ಇಂದಿಗೂ ಆರೋಗ್ಯ ಕ್ಷೇತ್ರದ ಬಗ್ಗೆ ಅಷ್ಟಾಗಿ ಗಮನ ಹರಿಸದಿರುವುದು ಖೇದಕರ ಸಂಗತಿ ಎಂದು ಅವರು ವಿಷಾದಿಸಿದರು.

2000ದ ವೇಳೆಗೆ ಜಗತ್ತಿನಲ್ಲಿ ಪ್ರತಿಯೊಬ್ಬರು ಆರೋಗ್ಯ ಹೊಂದಬೇಕು ಎಂದು 1977ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಗಡುವು ನೀಡಿತ್ತು. ಗಡುವು ಮುಗಿ ದರೂ ಗುರಿ ತಲುಪಿಲ್ಲ. ಇದಕ್ಕೆ ಸರ್ಕಾರದ ನಿಷ್ಕಾಳಜಿ ಕಾರಣವಾಗಿದೆ. ಪೌಷ್ಟಿಕ ಆಹಾರವನ್ನು ಪೂರೈಸುವುಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ 60 ದಶಲಕ್ಷ ಟನ್ ಆಹಾರ ಸಾಮಗ್ರಿ ಗೋದಾಮಿ ನಲ್ಲಿದ್ದರೂ ಹಂಚಿಕೆಯಾಗುತ್ತಿಲ್ಲ. ಇದರಿಂದ ಪ್ರತಿವರ್ಷ ದೇಶದಲ್ಲಿ ಸಾವಿರಾರು ಮಕ್ಕಳು ಮರಣ ಹೊಂದುತ್ತಿವೆ ಎಂದು ವಿವರಿಸಿದರು.

ಪ್ರಾಥಮಿಕ ಆರೋಗ್ಯ ಸೇವೆ ಸುಧಾರಿಸಬೇಕು. ಆರೋಗ್ಯ ಸೇವೆ ನೀಡುವಲ್ಲಿ ಸೇವಾ ಮನೋಭಾವ ಮುಖ್ಯವೇ ಹೊರತು ಲಾಭವಲ್ಲ. ವೈದ್ಯರ ಲಾಭ ಕೋರತನದಿಂದ ಹೆಣ್ಣು ಭ್ರೂಣಹತ್ಯೆ ಹೆಚ್ಚುತ್ತಿದೆ. ಆರೋಗ್ಯ ನೀಡುವ ಹೊಣೆಯನ್ನು ಸರ್ಕಾರ ಹಾಗೂ ಸ್ಥಳೀಯ ಆಡಳಿತ ವಹಿಸಿಕೊಳ್ಳಬೇಕು. ನೈರ್ಮಲ್ಯ ಇಲ್ಲ ದಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸಂಪೂರ್ಣ ನೈರ್ಮಲ್ಯದಿಂದ ಅಂತರ್ಜಲದ ಗುಣಮಟ್ಟ ಹೆಚ್ಚಲು ಸಾಧ್ಯ ಎಂದು ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನ ಆರಾಧ್ಯ ಮಾತನಾಡಿ, ದೇಗುಲಗಳಿಗೆ ನೀಡುವಷ್ಟೇ ಪ್ರಾಧ್ಯಾನತೆಯನ್ನು ಸ್ವಚ್ಛತೆಗೂ ನೀಡಬೇಕಾಗಿದೆ. ಸಮುದಾಯದಲ್ಲಿ ಸುಭದ್ರ ಶೌಚಾಲಯ, ಚರಂಡಿ, ರಸ್ತೆಗಳಿದ್ದರೆ ನೈರ್ಮಲ್ಯ ಸಾಧಿಸಲು ಸಾಧ್ಯವಿದೆ. ಆರೋಗ್ಯ ಜೀವನ ಹೊಂದಲು ಸಮುದಾಯ, ಸರ್ಕಾರ ಪಣತೊಡಬೇಕು ಎಂದರು.

ಡಾ.ಎಚ್.ಗಿರಿಧರ್, ಆರೋಗ್ಯ ಸೌಲಭ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ವಿಜ್ಞಾನ ಕೇಂದ್ರದ ಕಾರ್ಯಕಾರಿ ಮಂಡಳಿ ಸದಸ್ಯೆ ಎನ್.ಇಂದಿರಮ್ಮ ಸ್ವಾಗತಿಸಿದರು. ಕಾರ್ಯದರ್ಶಿ ರಾಮಕೃಷ್ಣಪ್ಪ ನಿರೂಪಿಸಿದರು. ಅಧ್ಯಕ್ಷ ಸಿ.ವಿಶ್ವನಾಥ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.