ADVERTISEMENT

ಬಂಡಾಯದತ್ತ ಒಲವು, ಪಟ್ಟು ಬಿಡದ ಸದಾ, ಮೇಜರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 7:30 IST
Last Updated 24 ಏಪ್ರಿಲ್ 2012, 7:30 IST

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಚಾರ ರಂಗೇರಿದೆ. ಕಣದಲ್ಲಿ ಐವರು ಅಭ್ಯರ್ಥಿಗಳಿದ್ದರೂ ಇಬ್ಬರು ಮಾಜಿ ಅಧ್ಯಕ್ಷರಾದ ಮೇಜರ್ ಡಿ.ಚಂದ್ರಪ್ಪ, ನಿ.ರಾ.ಸದಾನಂದ ಹಾಗೂ ಡಾ.ಸೋ.ಮು.ಭಾಸ್ಕರಾಚಾರ್ ನಡುವೆಯೇ ಪೈಪೋಟಿ ಕಂಡು ಬಂದಿದೆ.

ಈ ಮೂವರಲ್ಲಿ ಬಂಡಾಯ ಸಾಹಿತಿ ಡಾ.ಸೋ.ಮು.ಭಾಸ್ಕರಾಚಾರ್ ಪರ ಅನುಕಂಪ ಕೆಲಸ ಮಾಡುತ್ತಿದೆ. 80ರ ದಶಕದಲ್ಲಿ ಜಿಲ್ಲೆಯಲ್ಲಿ ಬಂಡಾಯ ಸಾಹಿತ್ಯ ಚಟುವಟಿಕೆಗಳ ನೇತೃತ್ವ ವಹಿಸಿದ್ದ ಭಾಸ್ಕರಾಚಾರ್, ಸಾಹಿತ್ಯ ಕೃಷಿಯಲ್ಲೂ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಂಡಾಯ ಸಾಹಿತ್ಯದ ಬೇರುಗಳನ್ನು ಗಟ್ಟಿಯಾಗಿ ನೆಲೆಗೊಳಿಸುವಲ್ಲಿ ಅವರ ಪಾತ್ರ ಹಿರಿದು.
 
ಅಲ್ಲದೆ ಕಳೆದ ಸಲ ಕೇವಲ 59 ಮತಗಳ ಅಂತರದಿಂದ ಡಿ.ಚಂದ್ರಪ್ಪ ವಿರುದ್ಧ ಸೋತಿದ್ದರು. `ಬಂಡಾಯ~ದ ಜೊತೆಗೆ ಅನುಕಂಪ ಕೂಡ ಅವರ ಪಾಲಿಗೆ ಕೆಲಸ ಮಾಡುತ್ತಿದೆ.ಸಾಮಾನ್ಯ ಚುನಾವಣೆಯಂತೆ ಸಾಹಿತ್ಯ ಪರಿಷತ್ ಚುನಾವಣೆಗೂ ಜಾತಿ ನಂಟಿನ ಕೆಸರು ಅಂಟಿದೆ. ಲಿಂಗಾಯತರೆ ಅಧಿಕ ಸಂಖ್ಯೆಯ ಮತದಾರರಿದ್ದು ಅವರು ಒಟ್ಟಾಗಿ ಯಾರ ಪರ ಎಂಬುದರ ಮೇಲೆ ಮಾಜಿ ಅಧ್ಯಕ್ಷರಾದ ಡಾ.ಚಂದ್ರಪ್ಪ, ನಿ.ರಾ.ಸದಾನಂದ ಅವರ ಗೆಲುವು ನಿಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ಸಲ 3800 ಮತಗಳಿದ್ದರೆ, ಈ ಸಲ ಮತದಾರರ ಸಂಖ್ಯೆ 5850ಕ್ಕೆ ಹೆಚ್ಚಿರುವುದು ಅಭ್ಯರ್ಥಿಗಳಿಗೆ ಚುನಾವಣೆ ಸವಾಲು ಎನಿಸಿದೆ.ಸ್ಪರ್ಧೆಯಲ್ಲಿರುವ ಕೊರಟಗೆರೆ ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಪಿ.ರಾಮಚಂದ್ರಪ್ಪ ಕಣದಲ್ಲಿ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿದ್ದಾರೆ. ಶಿರಾ, ಕೊರಟಗೆರೆ, ತಿಪಟೂರು ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ರಾಮಚಂದ್ರಪ್ಪ ಪಡೆಯುವ ಮತ ಸೋ.ಮು.ಭಾಸ್ಕರಾಚಾರ್ ಪಾಲಿಗೆ ತುಂಬಾ ದುಬಾರಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪಾವಗಡ ಮರೂರು ಮುದ್ದವೀರಪ್ಪ ಕಣದಲ್ಲಿದ್ದರೂ ಪ್ರಚಾರದಲ್ಲಿ ಇಲ್ಲ.
ಭಾಸ್ಕರಾಚಾರ್, ಚಂದ್ರಪ್ಪ, ಸದಾನಂದ ಗುಬ್ಬಿ ತಾಲ್ಲೂಕಿನವರಾಗಿರುವುದು ಈ ಸಲದ ಮತ್ತೊಂದು ವಿಶೇಷ. ಭಾಸ್ಕರಾಚಾರ್ ಹುಟ್ಟೂರು ತುಮಕೂರು ತಾಲ್ಲೂಕು ಸೋರೆಕುಂಟೆಯಾದರೂ ಬೆಳೆದಿದ್ದು ಗುಬ್ಬಿಯ ನಿಟ್ಟೂರಿನಲ್ಲಿ. ಹೀಗಾಗಿ ಮೂವರಲ್ಲಿ ಯಾರು ಗೆದ್ದರೂ ಈ ಸಲದ ಅಧ್ಯಕ್ಷ ಸ್ಥಾನ ಗುಬ್ಬಿ ಪಾಲಾಗಲಿದೆ ಎನ್ನುವುದೇ ವಿಶೇಷ.

ನಿಕಟಪೂರ್ವ ಅಧ್ಯಕ್ಷ ಡಿ.ಚಂದ್ರಪ್ಪ ಹಿಂದಿನ ಸಾಧನೆಯನ್ನೇ ಬೆನ್ನಿಗಿಟ್ಟುಕೊಂಡು ಮತದಾರರ ಬಳಿಗೆ ಹೋಗಿದ್ದಾರೆ. ಕೆಲವು ತಾಲ್ಲೂಕುಗಳಲ್ಲಿ ಅವರ ವಿರುದ್ಧ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಎರಡನೇ ಅವಧಿಗೆ ಯಾರೂ ಬೇಡ, ಹೊಸಬರಿಗೆ ಅವಕಾಶ ಕೊಡಬೇಕೆಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿರುವುದು ಚಂದ್ರಪ್ಪ, ಸದಾನಂದ ಅವರಿಗೆ ತಲೆಬಿಸಿ ಮಾಡಿದೆ.

ಗುಬ್ಬಿ, ತುಮಕೂರು ತಾಲ್ಲೂಕಿನಲ್ಲಿ ಅರ್ಧದಷ್ಟು ಮತಗಳಿದ್ದು, ಇಲ್ಲಿ ಹೆಚ್ಚು ಮತ ಸೆಳೆದರೆ ಗೆಲುವಿಗೆ ಸಹಕಾರಿ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮಾಜಿ ಅಧ್ಯಕ್ಷ ನಿ.ರಾ.ಸದಾನಂದ ಅವರು ಚಂದ್ರಪ್ಪ ಅವರಿಗೆ ತೀವ್ರ ಪೈಪೋಟಿ ನೀಡಿದ್ದಾರೆ. ಈ ಇಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಮತ ವಿಭಜನೆ ಈ ಇಬ್ಬರ ಪಾಲಿಗೆ ನುಗ್ಗಲಾರದ ಬಿಸಿ ತುಪ್ಪವಾಗಿದೆ.
ಪ್ರೊ.ಮರಿದೇವರು, ಕವಿತಾಕೃಷ್ಣ, ಮಾಜಿ ಅಧ್ಯಕ್ಷ ಏಕೇಶ್, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಾಲಂಬಿ ಅವರ ಪರವಾದ ಗುಂಪು ಸೋ.ಮು.ಭಾಸ್ಕರಾಚಾರ್ ಪರ ನಿಂತಿರುವುದು `ಬಂಡಾಯದ~ ನಗೆ ಹೆಚ್ಚಲು ಕಾರಣ ಎನ್ನಲಾಗುತ್ತಿದೆ.

ಇದರ ನಡುವೆಯೇ, ಸದಾನಂದ ಮತ್ತು ಚಂದ್ರಪ್ಪ ನಡುವೆ ರಾಜಿ ಸಂಧಾನದ ಮಾತುಗಳು ಕೇಳಿ ಬರುತ್ತಿವೆ. ಇದು ಫಲಪ್ರದವಾದರೆ ಫಲಿತಾಂಶ ಯಾವ ದಿಕ್ಕಿಗಾದರೂ ತಿರುಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.