ADVERTISEMENT

ಮಧ್ಯರಾತ್ರಿ ಮನೆಗೆ ನುಗ್ಗಿದ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 12:08 IST
Last Updated 19 ಜೂನ್ 2013, 12:08 IST

ಕುಣಿಗಲ್: ಮಧ್ಯರಾತ್ರಿ ಮನೆಗೆ ನುಗ್ಗಿ, ಗೃಹ ಬಂಧನದಲ್ಲಿದ್ದ ಚಿರತೆಯನ್ನು ಸುರಕ್ಷಿತವಾಗಿ ಹಿಡಿದು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಸಾಗಿಸಿದ ಘಟನೆ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಭಾಸ್ಕರಾಚಾರ್ ಮನೆ ಮುಂಭಾಗದಲ್ಲಿದ್ದ ಸಾಕು ನಾಯಿ ಮೇಲೆ ಸೋಮವಾರ ಮಧ್ಯರಾತ್ರಿ ಚಿರತೆ ದಾಳಿ ನಡೆಸಿದೆ. ಈ ವೇಳೆ ನಾಯಿ ಪ್ರಾಣಭಯದಿಂದ ಬೊಗಳಿದೆ. ಇದರ ಜತೆ ಗ್ರಾಮದ ಇತರ ನಾಯಿಗಳು ಬೊಗಳಿವೆ.
ಘಟನೆಯಿಂದ ಗಾಬರಿಗೊಂಡ ಮನೆಯವರು ಹೊರ ಬಂದು ನೋಡಿದಾಗ ಚಿರತೆ ದಾಳಿ ನಡೆಸುತ್ತಿರುವುದು ಕಂಡಿದೆ. ತಕ್ಷಣವೇ ದೊಣ್ಣೆಯಿಂದ ಚಿರತೆ ಬೆದರಿಸಲು ಮುಂದಾಗಿದ್ದಾರೆ. ಗಾಬರಿಗೊಂಡ ಚಿರತೆ ಮನೆ ಸೇರಿದೆ. ಕೂಡಲೇ ಮನೆಯ ಚಿಲಕವನ್ನು ಹೊರಗಿನಿಂದ ಹಾಕಲಾಗಿದೆ.

ನಂತರ ಮನೆಯವರು ಪೊಲೀಸ್, ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರು. ವಲಯ ಅರಣ್ಯ ಅಧಿಕಾರಿ ಚಿನ್ನಪ್ಪ ಮಧ್ಯರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮನೆಯಲ್ಲಿ ಚಿರತೆ ಬಂಧಿಯಾಗಿರುವ ಸುದ್ದಿ ತಿಳಿದು ಗ್ರಾಮಸ್ಥರು, ಸುತ್ತಮುತ್ತಲಿನ ಊರುಗಳ ಜನರು ತಂಡೋಪ ತಂಡವಾಗಿ ಮನೆ ಬಳಿ ಭೇಟಿ ನೀಡಿ, ಕಿಟಕಿ ಮೂಲಕ ಚಿರತೆ ನೋಡಲು ಮುಂದಾದರು. ಚಿರತೆ ಮನೆಯೊಳಗೆ ಇದ್ದಿದ್ದರಿಂದ ಮನೆ-ಮಂದಿಯೆಲ್ಲ ಬೆಳಗಿನವರೆಗೆ ರಸ್ತೆ ಬದಿ ಸಮಯ ಕಳೆದರು.

ಮನೆಯೊಳಗೆ ನುಗ್ಗಿದ ಚಿರತೆ ಕೊಟ್ಟಿಗೆಯಲ್ಲಿದ್ದ ಕುರಿ ಮೇಲೆ ದಾಳಿ ನಡೆಸಿ ಕೊಂದಿದೆ. ನಂತರ ಅಡುಗೆ ಕೋಣೆಯ ಮಂಚದ ಕೆಳಗೆ ಸೇರಿಕೊಂಡಿದೆ. ಬೆಳಗಾಗುತ್ತಿದ್ದಂತೆ ವಿಷಯ ಕಾಡ್ಗಿಚ್ಚಿನಂತೆ ಹರಡಿ ತಾಲ್ಲೂಕಿನ ವಿವಿಧೆಡೆಯಿಂದ ಜನತೆ ಚಿರತೆ ನೋಡಲು ಮನೆ ಮುಂದೆ ಜಮಾಯಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು.

ಮಧ್ಯಾಹ್ನ ಒಂದು ಗಂಟೆ ವೇಳೆಗೆ ಬನ್ನೇರುಘಟ್ಟ ಜೈವಿಕ ಅರಣ್ಯ ವಿಭಾಗದ ಅರವಳಿಕೆ ತಜ್ಞ ಡಾ.ಚೆಟ್ಟಯಪ್ಪನ್ ತಂಡ, ಪ್ರಭಾರಿ ಉಪ ಅರಣ್ಯ ಸಂರಕ್ಷಕ ದೇವರಾಜು ಆಗಮಿಸಿ ಚಿರತೆಗೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಸೆರೆ ಹಿಡಿಯುವ ಬಗ್ಗೆ ಕಾರ್ಯತಂತ್ರ ರೂಪಿಸಿದರು.

ಮನೆ ಮೆಲ್ಭಾಗದಲ್ಲಿನ ಹೆಂಚನ್ನು ತೆಗೆದು ಚಿರತೆ ಯಾವ ಕೋಣೆಯಲ್ಲಿದೆ ಎಂದು ಪತ್ತೆ ಹಚ್ಚಿದ ಸಿಬ್ಬಂದಿ, ಚಿರತೆ ಅಡುಗೆ ಕೋಣೆಯಲ್ಲಿರುವುದನ್ನು ಖಾತ್ರಿ ಪಡಿಸಿಕೊಂಡರು. ನಂತರ ಮನೆಯೊಳಗೆ ಪ್ರವೇಶಿಸಿದ ಅರವಳಿಕೆ ತಜ್ಞರು ಎರ್‌ಗನ್ ಮೂಲಕ ಎರಡು ಬಾರಿ ಮತ್ತು ಬರಿಸುವ ಔಷಧಿ ಪ್ರಯೋಗಿಸಿದರು. ಕೆಲ ಕ್ಷಣದಲ್ಲೇ ಚಿರತೆ ಪ್ರಜ್ಞೆ ತಪ್ಪಿತು. ನಂತರ ಗ್ರಾಮಸ್ಥರ ಸಹಕಾರದೊಂದಿಗೆ ಚಿರತೆಯನ್ನು ಬೋನಿನಲ್ಲಿ ಬಂಧಿಸಿದರು. ಬಂಧಿತ ಚಿರತೆ ನೋಡಲು ಜನಸಾಗರವೇ ಸೇರಿತ್ತು.

ವಲಯ ಅರಣ್ಯಾಧಿಕಾರಿ ಚಿನ್ನಪ್ಪ ಮಾತನಾಡಿ 8 ವರ್ಷದ ಗಂಡು ಚಿರತೆ ಸಾವನದುರ್ಗ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿರಬಹುದು. ಸುರಕ್ಷಿತವಾಗಿ ಹಿಡಿದಿದ್ದು, ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಕಳಿಸಿಕೊಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.