ADVERTISEMENT

ರಸ್ತೆ ಒತ್ತುವರಿ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 8:55 IST
Last Updated 27 ಅಕ್ಟೋಬರ್ 2011, 8:55 IST
ರಸ್ತೆ ಒತ್ತುವರಿ: ಗ್ರಾಮಸ್ಥರ ಪ್ರತಿಭಟನೆ
ರಸ್ತೆ ಒತ್ತುವರಿ: ಗ್ರಾಮಸ್ಥರ ಪ್ರತಿಭಟನೆ   

ತುರುವೇಕೆರೆ: ಸಮುದಾಯದ ಒಗ್ಗಟ್ಟಿನ ಸಂಕೇತವಾಗಿ ಊರವರೆಲ್ಲ ಸೇರಿ ನಿರ್ಮಿಸಿಕೊಂಡ ಸಮುದಾಯ ಭವನ ಹಾಗೂ ಶಾಲೆ ಆವರಣಗೋಡೆ ಅಕ್ರಮ ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ತಮ್ಮ ಕಣ್ಣ ಮುಂದೆ ಒಡೆದು ಛಿದ್ರವಾಗುವುದನ್ನು ನೋಡುವ ದೌರ್ಭಾಗ್ಯ ಕೊಡಗೀಹಳ್ಳಿ ಪಂಚಾಯಿತಿ ಹಾವಾಳದ ಗ್ರಾಮದ ಜನತೆಗೆ ಬಂದೊದಗಿದೆ.

ಬುಧವಾರ ಕೊಡಗೀಹಳ್ಳಿ ಪಂಚಾಯಿತಿ ಹಾವಾಳ ಗ್ರಾಮದಲ್ಲಿ ಸಂಪರ್ಕ ರಸ್ತೆ ನಿರ್ಮಿಸುವ ಸಲುವಾಗಿ ಗ್ರಾಮಸ್ಥರು ಅಕ್ರಮವಾಗಿ ಮಾಡಿಕೊಂಡಿದ್ದ ಒತ್ತುವರಿ ತೆರವುಗೊಳಿಸಲು ಮುಂದಾದಾಗ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಕಾನೂನು ಬದ್ಧವಾಗಿ ತಿಳಿವಳಿಕೆ ನೀಡದೆ, ಸಾಕಷ್ಟು ಕಾಲಾವಕಾಶ ನೀಡದೆ ಏಕಾಏಕಿ ಮನೆ ಒಡೆಯಲಾಗುತ್ತಿದೆ ಎಂದು ಗ್ರಾಮಸ್ಥರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

ಅ.17ರಂದು ನೋಟೀಸ್ ನೀಡಿ 19ರಂದು ಅಕ್ರಮ ತೆರವುಗೊಳಿಸಿ ಎಂದು ಆದೇಶಿಸಲಾಗಿದೆ. ಮಾನವೀಯತೆ ದೃಷ್ಟಿಯಿಂದ ಒಂದು ತಿಂಗಳಾದರೂ ಕಾಲಾವಕಾಶ ಕೊಡುವುದು ಬೇಡವೇ ಎಂದು ಪ್ರಕಾಶ್ ತಮಗೆ ನೀಡಿದ್ದ ತಿಳಿವಳಿಕೆ ಪತ್ರ ತೋರಿಸಿ  ಪ್ರಶ್ನಿಸಿದರು.

ಕೆಲವರಿಗೆ ತಿಳಿವಳಿಕೆಯನ್ನೇ ನೀಡಿಲ್ಲ, ಕೇವಲ ಪುಸ್ತಕವೊಂದಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ. ಅನಕ್ಷಸ್ಥರಿಗೆ ತಾವು ಏನಕ್ಕೆ ಸಹಿ ಮಾಡಿದ್ದೇವೆಂದೂ ಗೊತ್ತಿಲ್ಲ, ನ್ಯಾಯಾಯಲದ ಮೊರೆ ಹೋಗುತ್ತೇವೆಂಬ ಕಾರಣದಿಂದ ನಮಗೆ ಪಂಚಾಯಿತಿ ಖಾತೆ ಪ್ರತಿಯನ್ನು ನೀಡುತ್ತಿಲ್ಲ. ಈಗ ಏಕಾಏಕಿ ವಾಸದ ಮನೆ ಕೆಡವಿ ಹಾಕಲಾಗುತ್ತಿದೆ ಎಂದು ಹಲವು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಆದರೆ ತಾಲ್ಲೂಕು ಪಂಚಾಯಿತಿ ಇಒ ಪ್ರಕಾಶ್ ಹಾಗೂ ಕಾರ್ಯದರ್ಶಿ ವಿಜಯಣ್ಣ ತಮ್ಮ ಕ್ರಮ ಸಮರ್ಥಿಸಿಕೊಂಡರು.

ಕುತೂಹಲದ ಸಂಗತಿಯೆಂದರೆ ಪಂಚಾಯಿತಿ ಅತಿಕ್ರಮಣ ಒತ್ತುವರಿ ತೆರವುಗೊಳಿಸಿ ನಿರ್ಮಿಸಲು ಹೊರಟಿರುವ ಎರಡು ಅಡ್ಡರಸ್ತೆಗಳ ಕೊನೆಯಲ್ಲಿ ರಸ್ತೆಗೆ ಅಡ್ಡವಾಗಿ ಕಟ್ಟಿರುವ ಸರ್ಕಾರಿ ಶಾಲೆಯ ಆವರಣಗೋಡೆ ಹಾಗೂ ಶಾಸಕರ ನಿಧಿಯಿಂದ ನಿರ್ಮಿಸಿರುವ ಸಮುದಾಯ ಭವನವಿದೆ.

ಈ ಕಟ್ಟಡಗಳು ಆದ ನಂತರವಷ್ಟೇ ನಾವು ಅದರ ಹಿಂಭಾಗಕ್ಕೆ ಮನೆ, ಗುಡಿಸಲು ಹಾಕಿಕೊಂಡಿದ್ದೇವೆ. ಇವುಗಳನ್ನು ನಿರ್ಮಿಸುವಾಗ ಪಂಚಾಯಿತಿ ಆಡಳಿತಕ್ಕೆ ಇವು ಒತ್ತುವರಿ ಜಾಗದಲ್ಲಿವೆ ಎಂದು ಗಮನಕ್ಕೆ ಬರಲಿಲ್ಲವೇ? ಇವು ಹಾಗೆ ಇರುವುದಾದರೆ ನಮ್ಮ ಮನೆ ಕೆಡವಿ ಮಾಡುವ ರಸ್ತೆಯಿಂದೇನು ಉಪಯೋಗ? ಇದೆಲ್ಲ ರಾಜಕೀಯ ಪ್ರೇರಿತ ಎಂದು ಹಲವರು ಕಿಡಿಕಾರಿದರು.

ಗ್ರಾಮಸ್ಥರು ತಮ್ಮ ಸ್ವಾಭಿಮಾನದ ಪ್ರತೀಕವಾದ ಸಮುದಾಯ ಭವನ ಉಳಿಸಿಕೊಳ್ಳುತ್ತಾರಾ ಇಲ್ಲವೇ ಅದನ್ನೂ ಕೆಡವಿ ರಸ್ತೆ ದೂಳಾಗಲು ಬಿಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.