ADVERTISEMENT

ರೈಲು ಮಾರ್ಗ ಸರ್ವೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 10:15 IST
Last Updated 3 ಫೆಬ್ರುವರಿ 2012, 10:15 IST

ಕುಣಿಗಲ್: ಪಟ್ಟಣದಲ್ಲಿ ಹಾದು ಹೋಗುವ ನೆಲಮಂಗಲ- ಚನ್ನರಾಯಪಟ್ಟಣ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ನಾಗರೀಕರು ಅಡ್ಡಿಪಡಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಈ ಹಿಂದೆ ಸ್ಟಡ್‌ಫಾರಂನಲ್ಲಿ ರೈಲು ಮಾರ್ಗಕ್ಕೆ ಜಾಗವನ್ನು ಗುರುತಿಸಲಾಗಿತ್ತು. ವಿಶ್ವವಿಖ್ಯಾತ ಕುದುರೆ ಫಾರಂನ್ನು ರಕ್ಷಿಸುವಂತೆ ಆಗ್ರಹಿಸಿ ಶಾಸಕರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟಿಸಿ ಕೇಂದ್ರ ರೈಲ್ವೆ ಮಂತ್ರಿಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಮೇರೆಗೆ ಸ್ಥಳ ಪರೀಶೀಲನೆ ನಡೆಸಿದ್ದ ಅಧಿಕಾರಿಗಳು ಪರ್ಯಾಯ ಮಾರ್ಗಕ್ಕೆ ಅನುಮೋದನೆ ನೀಡಿದ್ದರು.

ಪರ್ಯಾಯ ಮಾರ್ಗದ ಭೂಸ್ವಾಧೀನಕ್ಕೆ ಪಟ್ಟಣದ ಚಿಕ್ಕಕೆರೆ ವ್ಯಾಪ್ತಿ, ಮಲ್ಲಾಘಟ್ಟದಲ್ಲಿ ಸರ್ವೆ ಕಾರ್ಯ ಮಾಡಲು ರೈಲ್ವೆ ಅಧಿಕಾರಿ ಸುಖೇಶ್ ನೇತೃತ್ವದ ತಂಡ ಗುರುವಾರ ಆಗಮಿಸಿದ್ದರು. ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ನಾಗರೀಕರಾದ ಆರ್.ಕೆ.ಗೌಡ, ಬೋರೆಗೌಡ, ಚಾಮಣ್ಣ ಹಾಗೂ ಇತರರು ಉದ್ಯಮಿಯೊಬ್ಬರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪರ್ಯಾಯ ಮಾರ್ಗ ರಚನೆಗೆ ಮುಂದಾಗಿರುವುದನ್ನು ಖಂಡಿಸಿ, ಈ ಮೊದಲೆ ನಿಗದಿಪಡಿಸಿದ ಜಾಗದಲ್ಲಿಯೇ ರೈಲು ಮಾರ್ಗ ನಿರ್ಮಿಸುವಂತೆ ಆಗ್ರಹಿಸಿದರು.

ಸುದ್ದಿ ತಿಳಿದ ತಕ್ಷಣ ತಹಶೀಲ್ದಾರ್ ಎಸ್.ಆರ್.ಕೃಷ್ಣಯ್ಯ, ಸಿಪಿಐ ಬಿ.ಕೆ.ಶೇಖರ್, ಪಿಎಸ್‌ಐ ಚನ್ನಯ್ಯಹಿರೇಮಠ್ ಸ್ಥಳಕ್ಕೆ ಭೇಟಿ ನೀಡಿ ರೈಲ್ವೆ ಅಧಿಕಾರಿಗಳು ಮತ್ತು ನಾಗರೀಕರೊಂದಿಗೆ ಮಾತುಕತೆ ನಡೆಸಿದರು. ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಸರ್ವೆ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದ ಮೇರೆಗೆ ನಾಳೆಯಿಂದ ಸರ್ವೆ ಕಾರ್ಯ ನಡೆಸಲು ಅಧಿಕಾರಿಗಳಿಗೆ ಅನುವು ಮಾಡಿಕೊಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.