ADVERTISEMENT

ಲೋಕಾಯುಕ್ತ ಬಲೆಗೆ ವೈದ್ಯೆ: ಬಂಧನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 5:45 IST
Last Updated 20 ಜನವರಿ 2012, 5:45 IST

ತುಮಕೂರು: ಗರ್ಭಕೋಶ ತೆಗೆಯುವ ಚಿಕಿತ್ಸೆಗಾಗಿ ಲಂಚ ಪಡೆಯುತ್ತಿದ್ದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ವೈದ್ಯೆಯೊಬ್ಬರು ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾಸ್ಪತ್ರೆಯ ವೈದ್ಯೆ ಡಾ. ರೇಖಾ ಸಿಕ್ಕಿ ಬಿದ್ದವರು. ಲಂಚ ಪಡೆಯುತ್ತಿದ್ದಾಗಲೇ ಅವರನ್ನು ಬಂಧಿಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಸ್.ಎಸ್. ಹಿರೇಮಠ, ಸಂಜೆಯಾದರೂ ವಿಚಾರಣೆ ಮುಂದುವರೆಸಿದ್ದರು.

`ಎರಡು ವರ್ಷಗಳ ಹಿಂದೆಯಷ್ಟೇ ರೇಖಾ ಅವರು ಶಿರಾ ಸರ್ಕಾರಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ವರ್ಗವಾಗಿ ಬಂದಿದ್ದರು. ಹೆರಿಗೆ ಮಾಡಿಸಲು ಕೂಡ ಇವರು ಲಂಚ ಕೇಳುತ್ತಾರೆ ಎಂಬ ಮಾತುಗಳು ಸಾಮಾನ್ಯವಾಗಿದ್ದವು. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳೊಂದಿಗೆ ಸರಿಯಾಗಿ ಸಹಕರಿಸುತ್ತಿರಲಿಲ್ಲ.

ಸುಖಾಸುಮ್ಮನೇ ರೋಗಿಗಳು ವೈದ್ಯರ ವಿರುದ್ಧ ದೂರು ನೀಡುವುದಿಲ್ಲ. ದೂರು  ನೀಡಿರಬೇಕಾದರೆ ಅವರು ಎಷ್ಟು  ನೊಂದಿರಬಹುದು ನೀವೆ ಹೇಳಿ~ ಎಂದು ಹೆಸರು ಹೇಳಲಿಚ್ಛಿಸದ ಆಸ್ಪತ್ರೆಯ ವೈದ್ಯರೊಬ್ಬರು  `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

ಹೆಬ್ಬೂರು ಹೋಬಳಿಯ ಚೆನ್ನಿಗಪ್ಪನಪಾಳ್ಯದ ಹೊನ್ನಪ್ಪ ಎಂಬುವರು ದೂರು ನೀಡಿದ್ದರು. ಹೊನ್ನಪ್ಪ ಅವರ ತಾಯಿ ಸಿದ್ದಮ್ಮ ಅವರು ಗರ್ಭಕೋಶದ ಶಸ್ತ್ರ ಚಿಕಿತ್ಸೆಗಾಗಿ ಜ. 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಹಣ ಕೊಡದ ಹೊರತು ಶಸ್ತ್ರಚಿಕಿತ್ಸೆ ಮಾಡುವುದಿಲ್ಲ ಎಂದು ಡಾ. ರೇಖಾ ಹೇಳಿದ್ದ ಹಿನ್ನೆಲೆಯಲ್ಲಿ ಅವರು ಅನಿವಾರ್ಯವಾಗಿ ಹಣ ಕೊಡಲು ಒಪ್ಪಿದ್ದರು. ಒಪ್ಪಂದದಂತೆ ಶುಕ್ರವಾರ (ಜ.19ರಂದು) ಶಸ್ತ್ರಚಿಕಿತ್ಸೆ ಮಾಡಲು ಡಾ. ರೇಖಾ ಒಪ್ಪಿಗೆ ನೀಡಿದ್ದರು ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಸ್.ಎಸ್.ಹಿರೇಮಠ `ಪ್ರಜಾವಾಣಿ~ಗೆ ತಿಳಿಸಿದರು.

ಲಂಚ ಕೊಡಲು ಒಪ್ಪಿದ್ದ ಹೊನ್ನಪ್ಪ ಕೊನೆಗೆ ಲೋಕಾಯುಕ್ತರಿಗೆ ದೂರು ಕೊಡಲು ನಿರ್ಧರಿಸಿ ಅದರಂತೆ ಶುಕ್ರವಾರ ಬೆಳಿಗೆಯಷ್ಟೇ ಶಸ್ತ್ರಚಿಕಿತ್ಸೆ ಮಾಡಲು ಡಾ. ರೇಖಾ ಲಂಚ ಕೇಳುತ್ತಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಲ್ಲಿ ಅಲವತ್ತುಕೊಂಡಿದ್ದರು. ಹೊನ್ನಪ್ಪ ಅವರಿಂದ ದೂರು ಪಡೆದು ಪೂರ್ವ ಯೋಜನೆಯಂತೆ ದಾಳಿ ನಡೆಸಿ ಡಾ. ರೇಖಾ ಅವರನ್ನು ಬಂಧಿಸಲಾಯಿತು ಎಂದು ಅವರು ವಿವರಿಸಿದರು.

ಡಾ. ರೇಖಾ ಪತಿ ಕೂಡ ಇದೇ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗುಬ್ಬಿ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದರೂ ಅವರು  ನಿಯೋಜನೆ ಮೇರೆಗೆ ಜಿಲ್ಲಾಸ್ಪತ್ರೆಯಲ್ಲಿದ್ದಾರೆ ಎನ್ನಲಾಗಿದೆ.

ಅಪರಿಚಿತ ಶವ ಪತ್ತೆ: ತಿಪಟೂರು: ತಾಲ್ಲೂಕಿನ ರಜತಾದ್ರಿಪುರ ಅರಣ್ಯ ಪ್ರದೇಶದಲ್ಲಿ ಸುಮಾರು 50- 60 ವಯಸ್ಸಿನ ಅಪರಿಚಿತ ಪುರುಷನ ಶವ ಗುರುವಾರ ಪತ್ತೆಯಾಗಿದೆ. ಶವದ ಬಳಿ ಕೀಟನಾಶಕ ಬಾಟಲಿ ದೊರೆತಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಅನುಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.