ADVERTISEMENT

ವಕೀಲರ ಅನಿರ್ದಿಷ್ಟಾವಧಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 10:10 IST
Last Updated 29 ಮಾರ್ಚ್ 2011, 10:10 IST
ವಕೀಲರ ಅನಿರ್ದಿಷ್ಟಾವಧಿ ಮುಷ್ಕರ
ವಕೀಲರ ಅನಿರ್ದಿಷ್ಟಾವಧಿ ಮುಷ್ಕರ   

ಮಧುಗಿರಿ: ನ್ಯಾಯಾಲಯ ಕಟ್ಟಡಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ವಕೀಲರು ನ್ಯಾಯಾಲಯದ ಮುಂದೆ ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರವನ್ನು ಜಿಲ್ಲಾ ನ್ಯಾಯಾಧೀಶರ ಭರವಸೆಗೂ ಬಗ್ಗದೆ ಮುಂದುವರೆಸಿದರು. ವಕೀಲರ ಸಂಘಕ್ಕೆ ಗ್ರಂಥಾಲಯ, ಮಹಿಳಾ ವಕೀಲರಿಗೆ ಪ್ರತ್ಯೇಕ ಕಟ್ಟಡ, ಕಕ್ಷಿದಾರರಿಗೆ ಶೌಚಾಲಯ, ಕ್ಯಾಂಟೀನ್, ವಾಹನ ನಿಲ್ದಾಣ ಹಾಗೂ ಶಾಶ್ವತ ನ್ಯಾಯಾಲಯ ಸಂಕೀರ್ಣ ನಿರ್ಮಿಸುವಂತೆ ಹಲವು ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸಿದರೂ; ಸರ್ಕಾರ ಗಮನಹರಿಸದೆ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಟಿ.ದೇವರಾಜು ಆರೋಪಿಸಿದರು.
 

ವಕೀಲರ ಈ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ ಈಡೇರಿಸುವವರೆವಿಗೂ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ತಿಳಿಸಿದರು.ಸುದ್ದಿ ತಿಳಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿ.ವಿ.ಅಂಗಡಿ ಹಿರೇಮಠ್ ಸಂಜೆ ಉಪ ವಿಭಾಗಾಧಿಕಾರಿ ಜತೆ ಮಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ಬಂದು ವಕೀಲರ ಸಮಸ್ಯೆ ಬಗ್ಗೆ ಚರ್ಚಿಸಿದರು. ವಕೀಲ ಶಾಮನಾಥ್ ಮಾತನಾಡಿ, ನ್ಯಾಯಾಲಯ ಸಂಕೀರ್ಣದ ಸಮಸ್ಯೆಗಳನ್ನು ವಿವರಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
 

ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಜಿ.ವಿ.ಅಂಗಡಿ ಹಿರೇಮಠ್ ಮಾತನಾಡಿ, ಮೂಲ ಸೌಲಭ್ಯ ಹಾಗೂ ಕಟ್ಟಡ ನಿರ್ಮಾಣದ ಬಗ್ಗೆ ಹೈಕೋರ್ಟ್ ವಿಶೇಷ ಆಸಕ್ತಿ ವಹಿಸಿದ್ದು, 2012ರ ವೇಳೆಗೆ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ ಎಂದ, ಅವರು ಕೇವಲ 3 ತಿಂಗಳ ಅವಧಿಯಲ್ಲಿ ಹರಿಹರರೊಪ್ಪ ಬಳಿ ಇರುವ 6 ಎಕರೆ ನಿವೇಶನದಲ್ಲಿ ಕಾಮಗಾರಿಯನ್ನು ಸಮರೋಪಾದಿ ಆರಂಭಿಸಿ ವರ್ಷದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದರು.
 

ADVERTISEMENT

ಈಗ ಹಾಲಿ ಇರುವ ಕಟ್ಟಡಗಳಿಗೆ ತಾತ್ಕಾಲಿಕವಾಗಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಹಾಗೂ ಮುಖ್ಯಾಧಿಕಾರಿಗೆ ನಾಳೆಯಿಂದಲೇ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿ ಅಗತ್ಯ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.ನ್ಯಾಯಾಧೀಶರಾದ ಪಿ.ನಾರಾಯಣಾಚಾರ್ಯ, ಪಿ. ದೇವೇಂದ್ರನ್, ಕಿರಣ್‌ಕುಮಾರ್ ವಡಿಗೇರಿ, ಆನಂದ್‌ಚೌಹಾಣ್,  ಎಸಿ ದೀಪ್ತಿ, ಡಿವೈಎಸ್‌ಪಿ ಪ್ರದೀಪ್ ಕುಮಾರ್, ತಹಶೀಲ್ದಾರ್ ನಾಗರಾಜಶೆಟ್ಟಿ, ಎಇಇ ಲಲಿತೇಶ್ವರ್, ಎ.ಇ ಸೌಮ್ಯ,  ವಕೀಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಪ್ರಮುಖ ವಕೀಲರು ಉಪಸ್ಥಿತರಿದ್ದರು.
 

ಮುಷ್ಕರ ಮುಂದುವರಿಕೆ
ಜಿಲ್ಲಾ ನ್ಯಾಯಾಧೀಶರ ಭರವಸೆಗೆ ಕೃತಜ್ಞತೆ ಸಲ್ಲಿಸುವುದಾಗಿ ವಕೀಲರ ಸಂಘದ ಅಧ್ಯಕ್ಷ ದೇವರಾಜ್ ತಿಳಿಸಿ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನ್ಯಾಯಾಲಯ ಆವರಣದಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾಮಗಾರಿ ಆರಂಭಿಸುವವರೆವಿಗೂ ಮುಷ್ಕರ ಮುಂದುವರಿಸುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.