ADVERTISEMENT

ವಿದ್ಯುತ್ ಕಡಿತ- ಜನಜೀವನ ಸ್ತಬ್ಧ

ಬೇಡಿಕೆ 650- ಪೂರೈಕೆ 300 ಮೆಗಾವಾಟ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:30 IST
Last Updated 6 ಏಪ್ರಿಲ್ 2013, 9:30 IST

ತುಮಕೂರು: ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ಜಿಲ್ಲೆ ಕಗ್ಗತ್ತಲಲ್ಲಿ ಮುಳುಗಿದೆ. ಕಳೆದ ಐದಾರು ದಿನಗಳಿಂದ ನಗರ ಪ್ರದೇಶದಲ್ಲಿ ದಿನಕ್ಕೆ ಐದಾರು ಗಂಟೆ ಸಹ ವಿದ್ಯುತ್ ಪೂರೈಕೆಯಾಗುತ್ತಿಲ್ಲ.

ವಿದ್ಯುತ್ ಸಮಸ್ಯೆಯಿಂದ ಜನಜೀವನ ಸ್ತಬ್ಧಗೊಂಡಿದೆ. ವ್ಯಾಪಾರ- ವಹಿವಾಟು ಸೇರಿದಂತೆ ಸಾಕಷ್ಟು ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಇನ್ನು ಗ್ರಾಮೀಣ ಪ್ರದೇಶಗಳ ಗೋಳು ಹೇಳತೀರದಂತಾಗಿದೆ.

ಖೋತಾ: ಜಿಲ್ಲೆಗೆ ದಿನಕ್ಕೆ 625ರಿಂದ 650 ಮೆಗಾವಾಟ್ ವಿದ್ಯುತ್ ಬೇಡಿಕೆ ಇದೆ. ಆದರೆ ಒಂದು ವಾರದಿಂದ 250ರಿಂದ 300 ಮೆಗಾವಾಟ್ ವಿದ್ಯುತ್ ಪೂರೈಕೆ ಆಗುತ್ತಿದೆ. ಬೇಡಿಕೆಯ ಅರ್ಧದಷ್ಟು ವಿದ್ಯುತ್ ಸಹ ಪೂರೈಕೆಯಾಗುತ್ತಿಲ್ಲ. ರಾಯಚೂರು, ಬಳ್ಳಾರಿ ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಏ. 1ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಒಂದೆಡೆ ವಿದ್ಯಾರ್ಥಿಗಳು ಕಂಗಾಲಾಗಿದ್ದರೆ, ಮತ್ತೊಂದೆಡೆ ರೈತರು ಒಣಗುತ್ತಿರುವ ಬೆಳೆ ರಕ್ಷಿಸಲಾಗದೆ ಆತಂಕಕ್ಕೆ ಒಳಗಾಗಿದ್ದಾರೆ. ಬೆಸ್ಕಾಂ ವಿರುದ್ಧ ರೈತರು ಆಕ್ರೋಶಗೊಂಡಿದ್ದು, ಪ್ರತಿನಿತ್ಯ ಒಂದಲ್ಲ ಒಂದು ಬೆಸ್ಕಾಂ ಕಚೇರಿ ಮುಂದೆ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.

ಕಳೆದ ಮೂರು ದಿನಗಳಿಂದ 1 ಗಂಟೆ ವಿದ್ಯುತ್ ನೀಡಿ, ನಿರಂತರ 4ರಿಂದ 5 ಗಂಟೆ ವಿದ್ಯುತ್ ತೆಗೆಯಲಾಗುತ್ತಿದೆ. ಮಧ್ಯ ರಾತ್ರಿ ಸಹ ವಿದ್ಯುತ್ ನೀಡುತ್ತಿಲ್ಲ. ನಗರ ಪ್ರದೇಶವೂ ಇಡೀ ರಾತ್ರಿ ಕಗ್ಗತ್ತಲಲ್ಲಿ ಮುಳುಗಿದೆ. ಜಿಲ್ಲೆಯಲ್ಲಿ ಸುಮಾರು 42 ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಕನಿಷ್ಠ ರಾತ್ರಿ ಸಮಯದಲ್ಲಿ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವವರೆಗೆ ರಾತ್ರಿ ಸಮಯ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಪ್ರತಿಭಟನಾ ನಿರತ ರೈತರನ್ನು ಸಮಾಧಾನಪಡಿಸುವ ಸಲುವಾಗಿ ಸ್ಥಳಕ್ಕೆ ಆಗಮಿಸುವ ಅಧಿಕಾರಿಗಳು `ಮುಂದೆ ಸಮರ್ಪಕವಾಗಿ ವಿದ್ಯುತ್ ಪೂರೈಸುವುದಾಗಿ' ಭರವಸೆ ನೀಡುತ್ತಿದ್ದಾರೆ. ಆದರೆ ದಿನಕ್ಕೆ ಕನಿಷ್ಠ 2 ಗಂಟೆ ಸಹ ಮೂರು ಫೇಸ್ ವಿದ್ಯುತ್ ನೀಡುತ್ತಿಲ್ಲ. ಒಮ್ಮೆ ವಿದ್ಯುತ್ ನೀಡಿದರೆ, ಗಂಟೆಗೆ ಐದಾರು ಬಾರಿ ಕಡಿತ ಮಾಡಿ ಮತ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ.

ಇದರಿಂದ ಪಂಪ್‌ಸೆಟ್ ಮತ್ತು ಮೋಟಾರ್‌ಗೆ ಹಾನಿಯಾಗುತ್ತಿದೆ. ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದರೆ ವಾರ ಕಳೆದರೂ ದುರಸ್ತಿ ಮಾಡುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಬರವಿದೆ. ಮಳೆ ಇಲ್ಲದೆ ಜನತೆ ಕಂಗಾಲಾಗಿದ್ದಾರೆ. ಮಳೆ ನಂಬಿ ಬೆಳೆ ತೆಗೆಯಲಾಗುತ್ತಿಲ್ಲ. ಜಿಲ್ಲೆಗೆ ಇನ್ನೂ ಮುಂಗಾರು ಪೂರ್ವ ಮಳೆಯೂ ಬಂದಿಲ್ಲ. ಅಂತರ್ಜಲ ಸಾವಿರಾರು ಅಡಿ ಆಳಕ್ಕೆ ಇಳಿದಿದೆ. ಎಲ್ಲೊ ಅಲ್ಲೊಂದು ಇಲ್ಲೊಂದು ಕೊಳವೆ ಬಾವಿಯಲ್ಲಿ ನೀರು ಬರುತ್ತಿದೆ. ಆದರೆ ವಿದ್ಯುತ್ ಪೂರೈಕೆ ಸಮಸ್ಯೆಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹಾಕಿರುವ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.

ಅಲ್ಲದೆ ಗ್ರಾಮೀಣ ಪ್ರದೇಶದ ಮನೆಗಳಿಗೆ ಸಹ ಉತ್ತಮ ವೋಲ್ಟೆಜ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಬಲ್ಬ್‌ಗಳು ವಿದ್ಯುತ್ ತಂತಿ ಕಾಣುವಂತೆ ಮಿಣುಕು ಉಳುವಿನಂತೆ ಉರಿಯುತ್ತವೆ. ಅದನ್ನೂ ಒಂದೆರೆಡು ಗಂಟೆ ಮಾತ್ರ ನೀಡಲಾಗುತ್ತಿದೆ. ಬೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಗ್ರಾಮೀಣ ಜನತೆ.

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಜನಪ್ರತಿನಿಧಿಗಳು ಚುನಾವಣೆ `ಜ್ವರ'ದಲ್ಲಿದ್ದಾರೆ. ಇತ್ತ ಜನತೆಯ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿಲ್ಲ. ಇತ್ತ ಅಧಿಕಾರಿಗಳೂ ಜನತೆಗೆ ಸಹಕರಿಸುತ್ತಿಲ್ಲ. `ಕರೆಂಟ್ ಸಪ್ಲೈ ಇಲ್ದೆ ಇದ್ರೆ ನಾವೇನ್ ಮಾಡೋಣ' ಎಂದು ಅಧಿಕಾರಿಗಳು ಹೇಳುತ್ತಾರೆ. ಯಾರಿಗೆ ದೂರು ಹೇಳಬೇಕು ಎಂದು ಪ್ರಶ್ನಿಸುತ್ತಿದ್ದಾರೆ ನಗರದ ನಿವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.