ADVERTISEMENT

ವೈದ್ಯರಿಲ್ಲದೆ ರಸ್ತೆಗೆ ಬಿದ್ದ ಗರ್ಭಿಣಿ

ಸರ್ಕಾರಿ ವೈದ್ಯರ ಸಾಮೂಹಿಕ ರಜೆ, ಖಾಸಗಿ ಆಸ್ಪತ್ರೆಯಲ್ಲಿ ಬಡವರ ಜೀವಕ್ಕೆ ಬೆಲೆ ಇಲ್ಲ

ಪ್ರಜಾವಾಣಿ ವಿಶೇಷ
Published 13 ಏಪ್ರಿಲ್ 2013, 6:27 IST
Last Updated 13 ಏಪ್ರಿಲ್ 2013, 6:27 IST
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಬೀದಿಯಲ್ಲಿ ಹೆರಿಗೆ ನೋವು ತಿನ್ನುತ್ತಾ ಮಲಗಿದ್ದ ಪಾವಗಡ ತಾಲ್ಲೂಕು ಪೋಲೇನಹಳ್ಳಿಯ ಗರ್ಭಿಣಿ
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಬೀದಿಯಲ್ಲಿ ಹೆರಿಗೆ ನೋವು ತಿನ್ನುತ್ತಾ ಮಲಗಿದ್ದ ಪಾವಗಡ ತಾಲ್ಲೂಕು ಪೋಲೇನಹಳ್ಳಿಯ ಗರ್ಭಿಣಿ   

ಪಾವಗಡ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಸೂಕ್ತ ಚಿಕಿತ್ಸೆ ದೊರೆಯದೆ ಬಡವರು ಪರದಾಡುತ್ತಿದ್ದಾರೆ.
ಇತ್ತೀಚೆಗೆ ಸರ್ಕಾರ ಆಸ್ಪತ್ರೆಯನ್ನು ಉನ್ನತ ದರ್ಜೆಗೇರಿಸಲು ಸೌಲಭ್ಯಗಳ ಮಹಾ ಪೂರವನ್ನೇ ಹರಿಸಿದೆ. ಆದರೆ ವೈದ್ಯರು ಹಾಗೂ ಇತರ ಸಿಬ್ಬಂದಿಯ ಇಚ್ಛಾಶಕ್ತಿ ಕೊರತೆಯಿಂದಾಗಿ ಬಡ ರೋಗಿಗಳಿಗೆ ಮಾತ್ರ ಚಿಕಿತ್ಸೆ ಸಿಗದಾಗಿದೆ.

ಕೈಯಲ್ಲಿ ಹಣವಿಲ್ಲದೆ ಸರ್ಕಾರಿ ಆಸ್ಪತ್ರೆಯನ್ನೇ ನೆಚ್ಚಿ ದೂರದ ಹಳ್ಳಿಗಳಿಂದ ಬರುವ ರೋಗಿಗಳಿಗೆ `ಔಷಧಿಗಳು ಖಾಲಿಯಾಗಿವೆ, ವೈದ್ಯರು ರಜೆಯಲ್ಲಿದ್ದಾರೆ, ಇಲ್ಲಿ ನಿಮಗೆ ಒಳ್ಳೆಯ ಚಿಕಿತ್ಸೆ ದೊರೆಯುವುದಿಲ್ಲ' ಎಂದು ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೇ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ತಾಲ್ಲೂಕಿನ ಹಳ್ಳಿಗಳಿಂದಷ್ಟೇ ಅಲ್ಲದೆ ಚಿಕಿತ್ಸೆಗಾಗಿ ಆಂಧ್ರಪ್ರದೇಶದ ಮಡಕಶಿರ, ಕುಂದುರ್ಪಿ, ಕಂಬದೂರು, ಪೇರೂರು, ಬೆಸ್ತರಪಲ್ಲಿ ಮುಂತಾದ ಹಳ್ಳಿಗಳಿಂದಲೂ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ.

ಪಟ್ಟಣದ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸೌಲಭ್ಯವಿದೆ. 12 ವೈದ್ಯರ ಹುದ್ದೆಗಳಿರುವ ಆಸ್ಪತ್ರೆಯಲ್ಲಿ ಕೇವಲ 5 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದ್ದ ಏಕೈಕ ಸ್ತ್ರೀರೋಗ ತಜ್ಞರು ಮಧುಗಿರಿ ಆಸ್ಪತ್ರೆಗೆ ನಿಯೋಜನೆಗೊಂಡಿದ್ದಾರೆ.17 ನರ್ಸ್ ಹುದ್ದೆಗಳಿದ್ದರೂ, ಕೇವಲ 12 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ 4 ಮಂದಿ ಪ್ರಸೂತಿ ರಜೆಯಲ್ಲಿದ್ದಾರೆ. 2 ಫಾರ್ಮಸಿಸ್ಟ್ ಹುದ್ದೆಗಳಿದ್ದು, ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಲ್ಲೂಕಿನಾದ್ಯಂತ 9 ಆರೋಗ್ಯ ಕೆಂದ್ರಗಳಿವೆ. ವೈ.ಎನ್.ಹೊಸಕೋಟೆ ಹಾಗೂ ತಿರುಮಣಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಸರ್ಕಾರ ಉನ್ನತೀಕರಿಸಿದೆ. ಆದರೆ ಅಲ್ಲಿಯೂ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ.

ಸಿ.ಕೆ.ಪುರ ಹಾಗೂ ದೊಡ್ದಹಳ್ಳಿಯಲ್ಲಿ ಆಸ್ಪತ್ರೆಯ ಕಟ್ಟಡಗಳು ಇನ್ನು ನಿರ್ಮಾಣ ಹಂತದಲ್ಲಿವೆ. ವೆಂಕಟಾಪುರ ಆರೋಗ್ಯ ಕೇಂದ್ರವನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಮಂಗಳವಾಡ, ಕೋಟಗುಡ್ದ, ಲಿಂಗದಹಳ್ಳಿ ಹಾಗೂ ಕೆ.ಟಿ.ಹಳ್ಳಿಗಳಲ್ಲಿ ಹೆಸರಿಗೆ ಮಾತ್ರ ಆರೋಗ್ಯ ಕೇಂದ್ರಗಳಿವೆ.
ವೈದ್ಯರ ಎಂದು ಬರುತ್ತಾರೋ ಎಂದು ಅಲ್ಲಿನ ರೋಗಿಗಳು ಚಾತಕ ಪಕ್ಷಿಗಳಂತೆ ಕಾಯಬೇಕಿದೆ.

ನೋವು ತಿಂದ ಬಸುರಿ
ಹೆರಿಗೆ ನೋವಿನಿಂದ ಬಳಲುತ್ತಿದ್ದ ತಾಲ್ಲೂಕಿನ ಪೋಲೇನಹಳ್ಳಿಯ ಗರ್ಭಿಣಿಯೊಬ್ಬರು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಬುಧವಾರ ರಸ್ತೆ ಪಾಲಾದರು. ಆಸ್ಪತ್ರೆಯಲ್ಲಿದ್ದ ಇಬ್ಬರು ತಜ್ಞ ವೈದ್ಯರು ಒಟ್ಟಿಗೆ ರಜೆ ಹಾಕಿದ್ದು, ಸಾರ್ವಜನಿಕರ ಸಂಕಷ್ಟವನ್ನು ಗಮನಿಸದೆ ಇಬ್ಬರಿಗೂ ಇಲಾಖೆ ರಜೆ ಮಂಜೂರು ಮಾಡಿದ್ದು ಗರ್ಭಿಣಿಯ ಸಂಕಷ್ಟಕ್ಕೆ ಕಾರಣವಾಗಿತ್ತು.

ಬುಧವಾರ ರಾತ್ರಿ ಹಳ್ಳಿಯಿಂದ ಗರ್ಭಿಣಿಯನ್ನು ತುರ್ತು ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಎಲ್ಲ ವೈದ್ಯರು ಯುಗಾದಿ ಹಬ್ಬಕ್ಕೆ ರಜೆ ಹಾಕಿ ತಮ್ಮ  ಊರುಗಳಿಗೆ ತೆರಳಿದ್ದರು. ಗರ್ಭಿಣಿಗೆ ಚಿಕಿತ್ಸೆ ನೀಡಲು ಒಬ್ಬ ಸಿಬ್ಬಂದಿಯೂ ಆಸ್ಪತ್ರೆಯಲ್ಲಿರಲಿಲ್ಲ. ಆಕೆಯನ್ನು ಶನಿ ಮಹಾತ್ಮ ವೃತ್ತದ ಬಳಿಯಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಗರ್ಭಿಣಿಯ ಸಂಬಂಧಿಕರ ಬಳಿ ಹಣವಿಲ್ಲವೆಂಬ ಕಾರಣದಿಂದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಯ ಒಳಗೂ ಸೇರಿಸಲಿಲ್ಲ. ಇದರಿಂದ ಆಕೆ ಹಲವು ಗಂಟೆಗಳ ಕಾಲ ಸಾರ್ವಜನಿಕರು ಓಡಾಡುವ ಹಾದಿಯಲ್ಲಿಯೇ ಅಸಹಾಯಕಳಾಗಿ ಮಲಗಿ ನೋವು ತಿನ್ನುತ್ತಿದ್ದಳು. ನಂತರ ಸಾರ್ವಜನಿಕರು ಒಗ್ಗೂಡಿ ಆಕೆಯ ಸಂಬಂಧಿಕರಿಗೆ ನೆರವು ನೀಡಿ ಮತ್ತೊಂದು ಆಸ್ಪತ್ರೆಗೆ ಸಾಗಿಸಿದರು.

ನಾನೇನು ಮಾಡಲಿ
ಘಟನೆ ಕುರಿತು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಹೇಶ್ ಅವರನ್ನು ಪ್ರಶ್ನಿಸಿದರೆ, `ನಾನೇನು ಮಾಡಲಿ' ಎಂಬ ಅಸಹಾಯಕತೆ ವ್ಯಕ್ತಪಡಿಸಿದರು. `ಎಲ್ಲರೂ ರಜೆ ಹಾಕಿ ಹೋಗಿದ್ದಾರೆ, ಇದು ನಮ್ಮ ಆಸ್ಪತ್ರೆ ಸಮಸ್ಯೆಯಲ್ಲ. ಇಡೀ ರಾಜ್ಯದಲ್ಲಿ ಇಂಥದ್ದೇ ವಾತಾವರಣವಿದೆ' ಎಂದು ಹೇಳಿದರು.
-ಕೆ.ಆರ್.ಜಯಸಿಂಹ

`ವೈದ್ಯರ ಮಧ್ಯೆ ಡೀಲ್...'

ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ಜನರನ್ನು ಶೋಷಿಸಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸಹಜ ಹೆರಿಗೆಯಾಗುವ ಅವಕಾಶಗಳಿದ್ದರೂ ಉಮ್ಮು ನೀರು ಖಾಲಿಯಾಗಿದೆ, ಮಗು ಅಡ್ಡ ತಿರುಗಿದೆ, ಮಗುವಿಗೆ ಕರುಳು ಸುತ್ತಿಕೊಂಡಿದೆ. ಇನ್ನೊಂದು ಗಂಟೆಯೊಳಗೆ ಸಿಜೇರಿಯನ್ ಮಾಡಿ ಮಗುವನ್ನು ಹೊರ ತೆಗೆಯದಿದ್ದರೆ ತಾಯಿ, ಮಗು ಇಬ್ಬರ ಜೀವಕ್ಕೂ ಅಪಾಯ' ಎಂದು ಹೆದರಿಸಿ ಬಡವರಿಂದ ಹಣ ಸುಲಿಯಲಾಗುತ್ತಿದೆ ಎಂದು ಆಸ್ಪತ್ರೆಗೆ ಮಗಳನ್ನು ಸೇರಿಸಿದ್ದ ವ್ಯಕ್ತಿಯೊಬ್ಬರು ಕಣ್ಣೀರಿಟ್ಟರು.

`ಗೋರ್ಮೆಂಟ್ ಡಾಕ್ಟ್ರುಗೂ- ಪ್ರೈವೇಟ್ ಡಾಕ್ಟ್ರುಗೂ ಡೀಲ್ ಆಗೈತೆ. ಅದ್ಕೇ ಇವ್ರ ಯಾವಾಗ್ಲೂ ರಜಾ ಹಾಕ್ತಾರೆ. ಪ್ರವೇಟ್‌ನವ್ರ ದುಡ್ಡಿಲ್ಲ ಅಂದ್ರೆ ಹತ್ರಕ್ಕೂ ಬಿಟ್ಕಣಲ್ಲ. ಬಡವ್ರ ಪಾಡು ಯಾರಿಗೂ ಬೇಡ' ಎಂದು ಅವರು ಉಮ್ಮಳಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.