ADVERTISEMENT

ಶಾಶ್ವತ ನೀರಾವರಿಗೆ ಆದ್ಯತೆ ನೀಡಿ

ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 7:10 IST
Last Updated 16 ಡಿಸೆಂಬರ್ 2013, 7:10 IST

ಚಿಕ್ಕಬಳ್ಳಾಪುರ: ಬರಪೀಡಿತ ಜಿಲ್ಲೆಯ ಜನರು ಶಾಶ್ವತ ನೀರಾವರಿಗಾಗಿ ಹೋರಾಟ ನಡೆಸುತ್ತಿರುವುದಕ್ಕೆ ಫಲ ಸಿಕ್ಕಿಲ್ಲ. ರಾಜಕೀಯ ಮರೆತು ಕೃಷಿಕರು ಹಾಗೂ ಸಾಮಾನ್ಯ ಜನರ ಅಗತ್ಯ ಪೂರೈಸುವುದು ಜನಪ್ರತಿನಿಧಿಗಳ ಆದ್ಯತೆಯಾಗಬೇಕು ಎಂದು ಆದಿ­ಚುಂಚನ­ಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದಲ್ಲಿ ನಡೆದ ಬಾಲಗಂಗಾಧರನಾಥ ಸ್ವಾಮೀಜಿ ಸಂಸ್ಮರಣೆ ಹಾಗೂ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅಭಿನಂದನಾ ಸಮಾರಂಭ­ದಲ್ಲಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ, ಕೋಲಾರ, ತುಮ­ಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೃಷಿಕರು ಮತ್ತು ಸಾಮಾನ್ಯ ಜನರು ನೀರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಇನ್ನೂ ಪ್ರತಿಫಲ ದೊರೆ­ಯ­ದಿರುವುದು ದುರಂತ. ವೇದಿಕೆಯ ಮೇಲೆ ಎಲ್ಲ ಪಕ್ಷದ ಮುಖಂಡರಿದ್ದು, ಜನರ ಸಮಸ್ಯೆ ನಿವಾರಿಸಲು  ರಾಜ­ಕೀಯ ಮರೆತು ಇವರೆಲ್ಲ ಸ್ಪಂದಿಸಬೇಕು ಎಂದು ಹೇಳಿದರು.
ಬಾಲಗಂಗಾಧರ­ನಾಥ ಸ್ವಾಮೀಜಿ ಕನಸನ್ನು ಸಾಕಾರ­ಗೊಳಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿದ್ದ ವಿವಿಧ ಕ್ಷೇತ್ರಗಳ ಸೇವೆ­ಗಳನ್ನು ಮುಂದುವರಿಸುತ್ತಿದ್ದೇವೆ. ಭಕ್ತರ ಸಹಕಾರ ಮತ್ತು ಧರ್ಮಪ್ರಜ್ಞೆ ಹಾಗೂ ಹಿರಿಯರ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ನುಡಿದರು.

ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ ಮಾತನಾಡಿ, ಒಕ್ಕಲಿಗ ಜನಾಂಗ ಹಿಂದು­ಳಿದಿದೆ. ಮಠದ ವತಿಯಿಂದ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಎಲ್ಲ ಸಮುದಾಯದ ಜನರಿಗೂ ಸಿಗುತ್ತಿದೆ. ಬರಪೀಡಿತ ಜಿಲ್ಲೆಗಳ ರೈತರು ಪೆನ್ಷನ್‌, ಟಿ.ಎ, ಡಿ.ಎ ಕೇಳುತ್ತಿಲ್ಲ, ನೀರು ಕೇಳುತ್ತಿದ್ದಾರೆ ಅದಕ್ಕೆ ಜನಪ್ರತಿ­ನಿಧಿಗಳು ಜಾತಿ, ಪಕ್ಷ, ರಾಜ­ಕೀಯ ಮರೆತು ಇಚ್ಛಾಶಕ್ತಿ ಪ್ರದರ್ಶಿಸ­ಬೇಕು ಎಂದು ಹೇಳಿದರು.

ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಕೆ.ಎಚ್‌.ಮುನಿಯಪ್ಪ, ವಿಧಾನಸಭೆ ಉಪಾಧ್ಯಕ್ಷ ಎನ್‌.ಎಚ್‌.­ಶಿವಶಂಕರರೆಡ್ಡಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕೃಷಿ ಸಚಿವ ಕೃಷ್ಣಬೈರೇಗೌಡ, ಶಾಸಕರಾದ ರಾಜಣ್ಣ, ಸುಬ್ಬಾರೆಡ್ಡಿ, ಕೆ.ಎಸ್.­ರಮೇಶ್‌ ಕುಮಾರ್‌, ಡಿ.ಕೆ.­ಶಿವ­ಕುಮಾರ್‌, ಡಾ.ಕೆ.ಸುಧಾಕರ್‌, ವಿಧಾನಪರಿಷತ್ ಸದಸ್ಯ ವೈ.ಎ.ನಾರಾ­ಯಣಸ್ವಾಮಿ, ಮಾಜಿ ಶಾಸಕ ಕೆ.ಪಿ.ಬಚ್ಚೇ­ಗೌಡ, ವಿ.ಮುನಿಯಪ್ಪ, ಮುಖಂಡರಾದ ಜಿ.ಆರ್.ನಾರಾ­ಯಣ­ಸ್ವಾಮಿ, ಕೆ.ವಿ.ನಾಗರಾಜ್,  ಚಿಕ್ಕಬಳ್ಳಾ­ಪುರ ಶಾಖಾ ಮಠದ ಮಂಗಳಾನಂದ­ನಾಥ ಸ್ವಾಮೀಜಿ ಇತರರಿದ್ದರು.

80 ಸಾವಿರ ಮಂದಿಗೆ ಊಟದ ವ್ಯವಸ್ಥೆ
ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಾರು ಎಂಬತ್ತು ಸಾವಿರ ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಾಗಿ 60 ಕೌಂಟರ್‌ ತೆರೆಯಲಾಗಿತ್ತು. ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.

ಅಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮೀಜಿ ಮೆರವಣಿಗೆ

ಚಿಕ್ಕಬಳ್ಳಾಪುರ: ಆದಿಚುಂಚನಗಿರಿ  ಮಠದ ಬಾಲಗಂಗಾಧರನಾಥ ಸ್ವಾಮೀಜಿ ಸಾಧನೆ ಸ್ಮರಣೆ, ನಿರ್ಮಲಾನಂದನಾಥ ಸ್ವಾಮೀಜಿ ಗುರು ವಂದನೆ ಸಲುವಾಗಿ ಭಾನುವಾರ ನಗರ ಹೊರವಲಯದ ಶಾಖಾ ಮಠದ ವೀರಾಂಜನೇಯ ದೇಗುಲದ ಹಿಂಭಾಗ ಗುರು ಸಂಸ್ಮರಣೆ ಹಾಗೂ ಭಕ್ತ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೇರಳ, ಆಂಧ್ರ, ತಮಿಳುನಾಡು, ಮಂಗಳೂರು ಹಾಗೂ ಮೈಸೂರು ಕಡೆಗಳಿಂದ ಆಗಮಿಸಿದ್ದ ಕಲಾತಂಡಗಳು ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಪಲ್ಲಕ್ಕಿಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು.

ನಗರದ ಮರುಳಸಿದ್ದೇಶ್ವರ ದೇಗುಲದ ಬಳಿಯಿಂದ ಪ್ರಾರಂಭವಾದ ಮೆರವಣಿಗೆ ಎಂ.ಜಿ.ರಸ್ತೆ ಮೂಲಕ ಹಾದು ಬಿ.ಬಿ.ರಸ್ತೆಯಲ್ಲಿ ಸಾಗಿ ಶನೈಶ್ಚರ ದೇಗುಲದವರೆಗೆ ಸಾಗಿತು.  ಡೊಳ್ಳು ಕುಣಿತ, ವೀರಗಾಸೆ, ಪಟಕುಣಿತ, ಗಾರುಡಿ­ಗೊಂಬೆ, ಕೀಲುಕುದುರೆ ವಿವಿಧ ರೀತಿ ವಾದ್ಯ ವೃಂದಗಳೊಂದಿಗೆ ಕೇಸರಿ ಧ್ವಜವನ್ನು ಹಿಡಿದ ಜನರು ಹಾಗೂ ವಿವಿಧ ಗ್ರಾಮ, ತಾಲ್ಲೂಕು ಕೇಂದ್ರಗಳಿಂದ ಆಗಮಿಸಿದ್ದ ಪಲ್ಲಕ್ಕಿಗಳನ್ನು ಹೊತ್ತ ಟ್ರ್ಯಾಕ್ಟರ್‌, ಜನರಿಂದ ರಸ್ತೆಗಳು ತುಂಬಿಹೋದವು.
ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿಯನ್ನು ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಕೂರಿಸಿ, ಭಕ್ತರು ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT