ADVERTISEMENT

ಸಂಶೋಧನಾ ಸ್ವಾತಂತ್ರ್ಯ ಅಗತ್ಯ: ಕುಲಪತಿ

​ಪ್ರಜಾವಾಣಿ ವಾರ್ತೆ
Published 22 ಮೇ 2012, 8:05 IST
Last Updated 22 ಮೇ 2012, 8:05 IST

ತುಮಕೂರು: ವಿಶ್ವವಿದ್ಯಾಲಯ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಆಡಳಿತ ಮಂಡಳಿಯ ಮೊದಲ ಜವಾಬ್ದಾರಿ ಎಂದು ಮಂಗಳೂರು ವಿ.ವಿ ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಮಧ್ಯಪೂರ್ವ ಬ್ಲಾಕ್ ಮತ್ತು ಉಪಹಾರ ಗೃಹಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಶೋಧಕರ ಆವಿಷ್ಕಾರ ಬೆಂಬಲಿಸುವ ಮನೋಭಾವ ಆಡಳಿತ ಮಂಡಳಿಗಳಿಗೆ ಇರಬೇಕು ಎಂದು ಕಿವಿಮಾತು ಹೇಳಿದರು.

ಆಡಳಿತ ಮತ್ತು ಜನಜೀವನದ ಎಲ್ಲ ವಿಭಾಗಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವ್ಯವಸ್ಥಿತ ಅಳವಡಿಕೆಯಿಂದ ದೇಶದ ಪ್ರಗತಿದರ ಸಾಕಷ್ಟು ವೃದ್ಧಿಯಾಗಿದೆ. ಶೇ.8ರ ಪ್ರಗತಿದರ ಕಾಯ್ದುಕೊಂಡಿರುವುದು ದೇಶದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ವಿಶ್ಲೇಷಿಸಿದರು.

ವಿಶ್ವದಲ್ಲಿ ಭಾರತಕ್ಕೆ ಯುವಜನತೆಯ ದೇಶ ಎಂಬ ಮನ್ನಣೆ ಇದೆ. ಇಲ್ಲಿನ ಶೇ.65ಕ್ಕೂ ಹೆಚ್ಚು ನಾಗರಿಕರ ವಯಸ್ಸು 39 ವರ್ಷದ ಆಸುಪಾಸಿನಲ್ಲಿದೆ. ಆದರೆ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಶೇ.15 ಮೀರಿಲ್ಲ. ಈ ಸಂಖ್ಯೆಯನ್ನು 2020ರ ವೇಳೆಗೆ ಶೇ.30ರಷ್ಟಕ್ಕೆ ಹೆಚ್ಚಿಸಲು ಯುಜಿಸಿ ಹಲವು ಕ್ರಮ ತೆಗೆದುಕೊಂಡಿದೆ ಎಂದರು.

ಸಿಂಡಿಕೇಟ್ ಸದಸ್ಯೆ ಪಿ.ಸೆಲ್ವಿದಾಸ್ ಮಾತನಾಡಿ, ಮೂಲ ಸೌಕರ್ಯ ಅಭಿವೃದ್ಧಿಪಡಿಸಿರುವ ಕುಲಪತಿ ಡಾ.ಎಸ್.ಸಿ.ಶರ್ಮ ಅವರನ್ನು ಅಭಿನಂದಿಸಿದರು.

ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಎಸ್.ಶಿವಣ್ಣ, ಸಿಂಡಿಕೇಟ್ ಸದಸ್ಯ ಪ್ರೊ.ಕೆ.ನರಹರಿ, ಕುಲಪತಿ ಡಾ.ಎಸ್.ಸಿ.ಶರ್ಮ, ಕುಲಸಚಿವರಾದ ಪ್ರೊ.ಡಿ.ಶಿವಲಿಂಗಯ್ಯ ಮತ್ತು ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.