ADVERTISEMENT

ಸುರಕ್ಷಿತ ಚಾಲನೆಗೆ ಹೆಲ್ಮೆಟ್ ಇದ್ದರೆ ಸಾಕೆ

ವೇಗಮಿತಿಗೆ ಕಡಿವಾಣ, ಸಂಚಾರ ನಿಯಮ ಪಾಲನೆಗೂ ಇರಲಿ ಒತ್ತು

ಪ್ರಸನ್ನಕುಮಾರ ಹಿರೇಮಠ
Published 1 ಫೆಬ್ರುವರಿ 2016, 11:14 IST
Last Updated 1 ಫೆಬ್ರುವರಿ 2016, 11:14 IST
ಸುರಕ್ಷಿತ ಚಾಲನೆಗೆ ಹೆಲ್ಮೆಟ್ ಇದ್ದರೆ ಸಾಕೆ
ಸುರಕ್ಷಿತ ಚಾಲನೆಗೆ ಹೆಲ್ಮೆಟ್ ಇದ್ದರೆ ಸಾಕೆ   

l
ತುಮಕೂರು: ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಇಂದಿನಿಂದ (ಫೆ.1) ಕಡ್ಡಾಯ. ಹೆಲ್ಮೆಟ್ ಕಡ್ಡಾಯದ ಅಧಿಸೂಚನೆ ಪ್ರಕಟವಾದ ನಂತರ ‘ಹೆಲ್ಮೆಟ್ ಒಂದಿದ್ರೆ ರೋಡ್ ಮೇಲೆ ನಾವು ಸುರಕ್ಷಿತವಾ’ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.

ಅಪಘಾತವಾದಾಗ ದ್ವಿಚಕ್ರ ವಾಹನ ಸವಾರರ ಜೀವ ಉಳಿಸುವಲ್ಲಿ ಹೆಲ್ಮೆಟ್ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದೊಂದರಿಂದಲೇ ಸುರಕ್ಷಿತ ಸಂಚಾರದ ಖಾತ್ರಿ ಸಿಗುವುದಿಲ್ಲ ಎಂಬುದು ಅನೇಕರು ಅಭಿಪ್ರಾಯ.

‘ಅಮ್ಮನ ಜತೆಗೆ ನಾನು ಹೆಲ್ಮೆಟ್ ಹಾಕಿಕೊಂಡೇ ಎಂ.ಜಿ.ಸ್ಟೇಡಿಯಂ ಕಡೆಯಿಂದ ಸ್ವಾಮೀಜಿ ಸರ್ಕಲ್‌ಗೆ ಬರ್ತಿದ್ವಿ. ಎದುರಿಗೆ ಬೈಕ್ ಸವಾರನೊಬ್ಬ ಹೆಲ್ಮೆಟ್ ಇಲ್ಲದೆ, ಕಿವಿಯಲ್ಲಿ ಮೊಬೈಲ್‌ ಫೋನ್‌ ಇಟ್ಟುಕೊಂಡು, ರಾಂಗ್‌ ವೇನಲ್ಲಿ ಜೋರಾಗಿ ಬರುತ್ತಿದ್ದ. ಅವನ ಕಂಡು ಗಾಬರಿಯಾಗಿ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಸಾವರಿಸಿಕೊಂಡೆ. ಆದರೆ ಯುವಕ ಗೊಂದಲಕ್ಕೊಳಗಾಗಿ ರಸ್ತೆಯಂಚಿಗೆ ಬೈಕ್ ಎಳೆದು ಸ್ಕಿಡ್‌ ಆಗಿ ಬಿದ್ದು ಗಾಯ ಮಾಡಿಕೊಂಡ. ನಮ್ಮ ವಾಹನದ ಮುಂದಿನ ಚಕ್ರಕ್ಕೂ ಬೈಕ್ ತಗುಲಿತು’ ಎಂದು ಆಘಾತಕಾರಿ ಅನುಭವವೊಂದನ್ನು ನಗರದ ಚೇತನಾ ಹಂಚಿಕೊಂಡರು.

ಅಪಘಾತ ಅನಿರೀಕ್ಷಿತವಾದರೂ ಹೆಲ್ಮೆಟ್ ಧರಿಸುವುದರಿಂದ ಮಾತ್ರ ಸುರಕ್ಷಿತವಾಗಿರುತ್ತೇವೆ ಎಂದುಕೊಳ್ಳುವುದು ಭ್ರಮೆ ಎಂಬುದನ್ನು ಈ ಅನುಭವ ಸಾಬೀತುಪಡಿಸುತ್ತದೆ.

ವಾಹನ ಚಾಲನೆಯೇ ಗೊತ್ತಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದುಕೊಳ್ಳುವ ಕೆಲ ಅರೆಬೆಂದ ಕಾಳುಗಳು ರಸ್ತೆಗಿಳಿಯುವುದು ಲಾಗಾಯ್ತಿನಿಂದಲೂ ನಡೆಯುತ್ತಿದೆ. ಸಂಚಾರ ನಿಯಮ ಪಾಲಿಸದೆ ಎರ್ರಾಬಿರ್ರಿ ನುಗ್ಗುವವರು, ಮತ್ತಿನಲ್ಲಿರುವವರು, ಕಂಡೀಷನ್ ಇಲ್ಲದ ವಾಹನ ಓಡಿಸುವವರು ಹೀಗೆ ಹಲವು ಬಗೆಯವರಿಂದ ಅಪಾಯಗಳಿವೆ.

ಕೆಲ ದಿನಗಳ ಹಿಂದೆ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡಿ ನುಗ್ಗಿದ ಕಾರು ಕೋತಿತೋಪು ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಗುದ್ದುವುದರಲ್ಲಿತ್ತು. ಹೆಲ್ಮೆಟ್ ಹಾಕಿದ್ದ ಬೈಕ್‌ ಸವಾರ ಒಮ್ಮೆಲೆ ಎರಡೂ ಬ್ರೇಕ್ ಹಿಡಿದು ಜೀವ ಉಳಿಸಿಕೊಂಡ. ಭದ್ರಮ್ಮ ಸರ್ಕಲ್ ಬಳಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ದಂಪತಿಗೆ ಆಟೊ ಡಿಕ್ಕಿ ಹೊಡೆದು ಬೀಳಿಸಿತ್ತು.

ಕೇವಲ 3 ಅಡಿ ಹಿಂದೆ ಇದ್ದ ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕ ಹಾಕಿದ ಬ್ರೇಕ್‌ ಅವರ ಜೀವ ಉಳಿಸಿತ್ತು. ಇಲ್ಲದಿದ್ದರೆ ಹೆಲ್ಮೆಟ್ ಇದ್ದರೂ ಅವರು ಸಾವು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ.

‘ಸಂಚಾರ ನಿಯಮಗಳ ಪಾಲನೆ ಮತ್ತು ವೇಗಮಿತಿಯ ಚಾಲನೆಯಿಂದ ಮಾತ್ರ ಸುರಕ್ಷಿತ ಸಂಚಾರ ಸಾಧ್ಯ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ನಿಯಮ ಪಾಲನೆಯ ಒಂದು ಭಾಗ ಮಾತ್ರ’ ಎನ್ನುತ್ತಾರೆ ಉದ್ಯಮಿ ರಾಮಚಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.