ADVERTISEMENT

ಹಳೆಮನೆ ಅಂತ್ಯ ಸಂಸ್ಕಾರಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 7:40 IST
Last Updated 10 ಜೂನ್ 2011, 7:40 IST
ಹಳೆಮನೆ ಅಂತ್ಯ ಸಂಸ್ಕಾರಕ್ಕೆ ಜನಸಾಗರ
ಹಳೆಮನೆ ಅಂತ್ಯ ಸಂಸ್ಕಾರಕ್ಕೆ ಜನಸಾಗರ   

ಚಿಕ್ಕನಾಯಕನಹಳ್ಳಿ: ಹಿರಿಯ ರಂಗಕರ್ಮಿ ಹಾಗೂ ರಂಗಾಯಣ ನಿರ್ದೇಶಕ ಪ್ರೊ.ಲಿಂಗದೇವರು ಹಳೆಮನೆ ಅಂತ್ಯ ಸಂಸ್ಕಾರ ಹಾಲುಗೊಣದ ಸ್ವಂತ ಜಮೀನಿನಲ್ಲಿ ಗುರುವಾರ ನೆರವೇರಿತು.

ಹುಟ್ಟೂರಿಗೆ ಬುಧವಾರ ಸಂಜೆ ಪಾರ್ಥಿವ ಶರೀರ ತರಲಾಯಿತು. ಹಾಲುಗೊಣ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಸಂಬಂಧಿಕರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಗುರುವಾರ ಮಧ್ಯಾಹ್ನ 1 ಗಂಟೆಗೆ ಹಾಲುಗೊಣದ ಸ್ವಂತ ಜಮೀನಿನಲ್ಲಿ ಸೋದರ ಚಿದಾನಂದಮೂರ್ತಿ ಅಂತ್ಯ ಸಂಸ್ಕಾರ ಉತ್ತರ ಕ್ರಿಯಾದಿ ನಡೆಸಿದರು.

ಸಂಸದ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್‌ಬಾಬು, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಪಂಚಾಕ್ಷರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ್, ರಮೇಶ್‌ಕುಮಾರ್, ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವ ಮ್ಲ್ಲಲಿಕಾರ್ಜುನ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಗೋಡೆಕೆರೆ ಮಠಾಧೀಶ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ, ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಚಿತ್ರ ನಿರ್ದೇಶಕ ಬ್ಯಾಲಕೆರೆ ಲಿಂಗದೇವರು, ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಬಿಳಿಗೆರೆ ಕೃಷ್ಣಮೂರ್ತಿ, ಎಂ.ವಿ. ನಾಗರಾಜರಾವ್, ಕೆ.ಬಿ.ಸಿದ್ದಯ್ಯ, ಜಿಲ್ಲಾ ವಿಜ್ಞಾನ ಕೇಂದ್ರದ ಸಿ.ಯತಿರಾಜು, ತಹಸೀಲ್ದಾರ್ ಟಿ.ಸಿ.ಕಾಂತರಾಜು, ಸಿಡಿಪಿಒ ಅನೀಸ್‌ಕೈಸರ್ ಮುಂತಾದವರು ಅಂತಿಮ ದರ್ಶನ ಪಡೆದರು.

ಮೃತರ ಸ್ಮರಣಾರ್ಥ ಹಾಲುಗೊಣ ಗ್ರಾಮದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ಹಳೆಮನೆ ನಿಧನಕ್ಕೆ ಸಂತಾಪ
ತುಮಕೂರು: ಎಡಪಂಥೀಯ ಚಿಂತಕ ಪ್ರೊ.ಲಿಂಗದೇವರು ಹಳೆಮನೆ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಸಿಪಿಎಂ, ಸಿಐಟಿಯು ಸಂತಾಪ ಸೂಚಿಸಿದೆ.

ಎಪ್ಪತ್ತರ ದಶಕದಲ್ಲಿ ಮೈಸೂರಿನಲ್ಲಿ ರಂಗ ಚಟುವಟಿಕೆಗಳೊಂದಿಗೆ ಹೋಟೆಲ್ ಕಾರ್ಮಿಕರ ಚಳವಳಿಗೆ ಸಹಕಾರ ನೀಡಿದ್ದರು. ಅವರ ಕುಟುಂಬ ವರ್ಗದ ದುಃಖದಲ್ಲಿ ತಾವು ಬಾಗಿಗಳೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಳೆಮನೆ ನಿಧನದಿಂದ ಅತೀವ ದುಃಖವಾಗಿದೆ ಎಂದು ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಡಿ.ಶಿವನಂಜಯ್ಯ ಸಂತಾಪದಲ್ಲಿ ತಿಳಿಸಿದ್ದಾರೆ. ತೋವಿನಕೆರೆ ಹಳ್ಳಿ ಸಿರಿ ಬಳಗ ಸಂತಾಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.