ADVERTISEMENT

ಹೆಬ್ಬೂರು; ಬಿಜೆಪಿಗೆ ಮಾಸ್ತಿಗೌಡ ಸೇರ್ಪಡೆ

ಕಾಂಗ್ರೆಸ್‌ ತೊರೆದ ಮಾಜಿ ಶಾಸಕ ಎಚ್.ನಿಂಗಪ್ಪ ಪರಮಾಪ್ತ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 13:33 IST
Last Updated 28 ಏಪ್ರಿಲ್ 2018, 13:33 IST

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಎಚ್.ನಿಂಗಪ್ಪ ಅವರ ಆಪ್ತರಲ್ಲಿ ಒಬ್ಬರಾದ ಮುಖಂಡ  ಹೆಬ್ಬೂರು ನರಸಾಪುರದ ಮಾಸ್ತಿಗೌಡ ಅವರು ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಶಾಸಕ ಬಿ.ಸುರೇಶ್‌ಗೌಡ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಹೆಬ್ಬೂರು ಹೋಬಳಿ ನರಸಾಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಸ್ತಿಗೌಡ ಅವರು, ‘ಕಳೆದ 35 ವರ್ಷಗಳಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಆದರೆ, ಪಕ್ಷ ನಮಗೆ ಏನನ್ನೂ ಮಾಡಲಿಲ್ಲ. ಪಕ್ಷಕ್ಕಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ’ ಎಂದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಟ್ಟು ನಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆವು. ಆ ಪಕ್ಷದಲ್ಲಿದ್ದಾಗಲೂ ಜನರ ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ’ ಎಂದರು.

ADVERTISEMENT

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಕಟ್ಟಿ ಬೆಳೆಸಿರುವ ಸುರೇಶ್‌ಗೌಡ ಅವರ ಕಾರ್ಯ ಮೆಚ್ಚಿ ಪಕ್ಷ ಸೇರ್ಪಡೆಗೊಂಡಿದ್ದೇನೆ. ಅವರನ್ನು ಈ ಕ್ಷೇತ್ರದಲ್ಲಿ ಗೆಲ್ಲಿಸಲು ಯಾವುದೇ ಷರತ್ತು ಇಲ್ಲದೇ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.

ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ, ‘ಪಕ್ಷದ ಅಭಿವೃದ್ಧಿ ದೃಷ್ಟಿಕೋನ ಮೆಚ್ಚಿ ಬೇರೆ ಪಕ್ಷದವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಅಭಿವೃದ್ಧಿಪರ ಚಿಂತನೆಯುಳ್ಳ ಮಾಸ್ತಿಗೌಡ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಇನ್ನಷ್ಟು ಬಲ ತುಂಬಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಗೌಡ  ಮಾತನಾಡಿ,‘ಇನ್ನೂ ಅನೇಕ ಮುಖಂಡರು ಕ್ಷೇತ್ರದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ’ಎಂದು ಹೇಳಿದರು.

ಚಿಕ್ಕಣ್ಣ, ರಂಗನಾಥ್, ನಾಗರಾಜು, ಹರೀಶ್ ಕೃಷ್ಣ, ಗಂಗಾಧರ್, ರಂಗನಾಥ್, ಶಿವಕುಮಾರ್, ಸಂಜೀವಣ್ಣ, ಋಷಿಕೇಶ್, ಜಯಣ್ಣ, ಕದಿರೇಗೌಡ, ಸುರೇಶ್, ಸೇರ್ಪಡೆಗೊಂಡರು.ಸಿದ್ದೇಗೌಡ, ಸಿದ್ದಗಂಗಯ್ಯ, ಮಧು, ಉಮೇಶ್‌ಗೌಡ, ಉಮೇಶ್, ಬಳ್ಳಗೆರೆ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.