ADVERTISEMENT

ಹೊಲ ಒಣಗೈತೆ, ಕರೆಂಟ್ ಕೊಡಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:32 IST
Last Updated 6 ಏಪ್ರಿಲ್ 2013, 9:32 IST

ಶಿರಾ: `ಸ್ವಾಮಿ ನಾವು ಇಲ್ಲಿ ಸ್ಟ್ರೈಕ್ ಮಾಡಲಿಕ್ಕೆ ಬಂದಿಲ್ಲ. ನಮಗೂ ಗೊತ್ತು ನೀತಿ ಸಂಹಿತೆ ಇದೆ ಅಂತ. ನಾವೇನ್ ಬೀಗ ಜಡಿದು ಗಲಾಟೆ ಮಾಡೋದಿಲ್ಲ ನಮಗೀಗ ಕರೆಂಟ್ ಬೇಕು ಅಷ್ಟೇ..'

-ಕಳ್ಳಂಬೆಳ್ಳ ರೈತರು ಸ್ಥಳೀಯ ಬೆಸ್ಕಾಂಗೆ ಮುತ್ತಿಗೆ ಹಾಕಿ ತಮ್ಮ ಸಮಸ್ಯೆಯನ್ನು ಹೀಗೆ ಮುಂದಿಟ್ಟರು.
ತಾಲೂಕಿನ ಕಳ್ಳಂಬೆಳ್ಳದಲ್ಲಿ ಸತತ ಒಂದು ತಿಂಗಳಿಂದ ದಿನಕ್ಕೆ ಒಂದು ತಾಸಾದ್ರೂ ಕರೆಂಟ್ ಇಲ್ಲ. ನೀವ್ ಕೊಡೊ ಕರೆಂಟ್‌ಗೆ ಡ್ರಿಪ್‌ನಲ್ಲಿ ಇರೂ ನೀರು ಸಹ ನೆಲ ಸೇರುತ್ತಿಲ್ಲ. ಹೀಗೆ ಆದ್ರೆ ಹೊಲವೆಲ್ಲ ಒಣಗೆ ಹೋಗಿ ಬಿಡುತ್ತೆ. ನಮ್ಗೂ ಗೊತ್ತಿದೆ ಎಲ್ಲಾ ಕಡೆ ಪವರ್‌ಕಟ್ ಆಗ್ತಿದೆ ಅಂತ. ನಾವೇನ್ ಎಲ್ಲಾ ನಮ್ಗೆ ಕೊಡಿ ಅಂತ ಕೇಳ್ತಿಲ್ಲ. ನ್ಯಾಯವಾಗಿ ನಮಗೇನ್ ಕೊಡ್ಬೇಕೊ ಅಷ್ಟು ಕೊಡಿ ಸ್ವಾಮಿ ಎಂದು ಗೋಗರೆದರು.

ತಕ್ಷಣ ದೌಡಾಯಿಸಿದ ಎಇಇ ಕರೇಗೌಡ್ರು, ಸರ್ಕಾರವೇ 5 ತಾಸು ಕೊಡಿ ಅಂತ ಅದೇಶ ಮಾಡಿದೆ. ಆದ್ರೆ ನಮ್ಗೆ ಅಷ್ಟು ಪವರ್ ಸಪ್ಲೈ ಆಗ್ತಿಲ್ಲ ಎಂದು ಹೇಳಿದರು. ರೈತನೊಬ್ಬ ಪ್ರತಿಕ್ರಿಯಿಸಿ, ನೋಡಿ ಸ್ವಾಮಿ ಹೋಗ್ಲಿ ಕಡೇ ಪಕ್ಷ ಒಂದು ದಿನಕ್ಕೆ 3 ತಾಸು ಆದ್ರೂ ಕೊಡ್ತಿದ್ದೀರಾ? ನೋಡ್ರೀ ರೈತರನ್ನ ರೊಚ್ಚಿಗೇಳಿಸಬೇಡಿ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ. ನಾವು ಒಳ್ಳೆ ಮಾತಿಂದ ಕೇಳ್ತಿದಿವಿ ದಯವಿಟ್ಟು ಸ್ವಾಮಿ ಕರೆಂಟ್ ಕೋಡಿ ಎಂದು ಅಂಗಲಾಚಿದರು.

ನೋಡಿ ಸ್ವಾಮಿ ನಮ್ಮ ಕಳ್ಳಂಬೆಳ್ಳದ ವಿಭಾಗೀಯ ಅಧಿಕಾರಿ ನಮ್ಗೆ ತುಂಬಾ ಸ್ಪಂದಿಸಿದ್ದಾರೆ. ಅವರ ಮುಖ ನೋಡಿಕೊಂಡು ನಾವೇನ್ ಕದನಕ್ಕೂ ಇಳಿದಿಲ್ಲಾ. ತೀರ ಹದಗೆಟ್ಟು ಹೋದ್ರೆ, ಜನ ರೊಚ್ಚಿಗೇಳ್ತಾರೆ. ಇದಕ್ಕೆ ಮೊದಲು ನಮ್ಗೆ ಕರೆಂಟ್ ವ್ಯವಸ್ಥೆ ಮಾಡಿ ಎಂದು ಎಇಇ ಕರೇಗೌಡರ ಬಳಿ ರೈತರು ವಿನಂತಿಸಿದರು. ಉನ್ನತ ಅಧಿಕಾರಿಗಳಿಗೆ ಫೋನಾಯಿಸಿದ ಸ್ಥಳೀಯ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್‌ಗೆ ಬಿಸಿ ಮುಟ್ಟಿಸಿದ ಪವರ್ ಕಟ್
ಶಿರಾ: ಪವರ್ ಕಟ್ ಬಿಸಿ ತಹಶೀಲ್ದಾರರಿಗೂ ತಪ್ಪಲಿಲ್ಲ. ಅಂಥದೊಂದು ಪ್ರಸಂಗದಿಂದ ಟಿ.ಸಿ. ಕಾಂತರಾಜು ಮತ್ತು ಕಂದಾಯ ಇಲಾಖೆ ತಂಡ ಜನರೇಟರ್ ಮಳಿಗೆ ಬಳಿ ತೆರಳಿ ಬೀಗ ಮುದ್ರೆ ಹಾಕಿದ ಪ್ರಸಂಗ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ.

ವಿದ್ಯುತ್ ಅಭಾವ ಕಾಡಬಹುದೆಂದು 15 ದಿನದ ಹಿಂದೆಯೇ ಬಾಡಿಗೆಗೆ ಜನರೇಟರ್ ವ್ಯವಸ್ಥೆಗೊಳಿಸಲು ತಹಸೀಲ್ದಾರ್ ಕಾಂತರಾಜು ಅವರು ಸ್ಥಳೀಯ ಟೆಂಟ್ ಹೌಸ್ ಮಾಲೀಕರಲ್ಲಿ ತಿಳಿಸಿದ್ದರು. ಸಕಾಲಕ್ಕೆ ಜನರೇಟರ್ ವ್ಯವಸ್ಥೆ ಮಾಡಲಿಲ್ಲ ಎಂದು ಕುಪಿತಗೊಂಡ ತಹಸೀಲ್ದಾರ್ ಟಿ.ಸಿ.ಕಾಂತರಾಜು ಮತ್ತು ಕಂದಾಯ ಇಲಾಖೆ ತಂಡ ಮಳಿಗೆಯ ಬಳಿ ತೆರಳಿ ಬೀಗ ಮುದ್ರೆ ಹಾಕಿತು.

`ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್, `ಎಲೆಕ್ಷನ್ ಟೈಂ. ರಾತ್ರಿಯೆಲ್ಲಾ ಮಾಡಿದ್ರೂ ಮುಗಿಯದಷ್ಟು ಕೆಲಸ ಇದೆ' ಎಂದು ಹೇಳಿದರು.
ಮಾಲೀಕ ತಕ್ಷಣವೇ ಬೇರೆ ಕಡೆಯಿಂದ ಜನರೇಟರ್ ವ್ಯವಸ್ಥೆ ಮಾಡಲಿಕ್ಕೆ ಮುಂದಾದರು. ಜನರೇಟರ್ ಕಚೇರಿ ತಲುಪಿ ಚಾಲೂ ಆದ ಮೇಲೆ ಬೀಗಮುದ್ರೆ ತೆಗೆಯುವುದಾಗಿ ಹೇಳಿ ಹೊರಟರು. ತಹಶೀಲ್ದಾರ್ ಟಿ.ಸಿ.ಕಾಂತರಾಜು ಅವರ ಈ ಪ್ರಸಂಗ ನೋಡುಗರಿಗೆ ಕೆಲ ಕ್ಷಣ ಹಾಸ್ಯ ಎನಿಸಿದ್ದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT