ADVERTISEMENT

ಶಿರಾ ಉಪಚುನಾವಣೆ ಅಭ್ಯರ್ಥಿ ಆಯ್ಕೆ: ಜೆಡಿಎಸ್‌,ಬಿಜೆಪಿಯಲ್ಲಿ ಮುಗಿಯದ ಗೊಂದಲ!

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 2:53 IST
Last Updated 30 ಸೆಪ್ಟೆಂಬರ್ 2020, 2:53 IST

ಶಿರಾ: ಶಾಸಕ ಬಿ.ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಸಂಚಲ ಮೂಡಿಸಿದೆ.

ನವೆಂಬರ್‌ 3ರಂದು ಚುನಾವಣೆ ನಿಗದಿಯಾಗಿದೆ. ಕಾಂಗ್ರೆಸ್ ಈಗಾಗಲೇ ಟಿ.ಬಿ. ಜಯಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆದರೆ, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ಗೊಂದಲ ಮುಂದುವರೆದಿದೆ.

ಚುನಾವಣೆ ದಿನಾಂಕ ಪ್ರಕಟಣೆಗೆ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಚಾರ ಪ್ರಾರಂಭಿಸಿವೆ. ಜೆಡಿಎಸ್‌ನಲ್ಲಿ ಇನ್ನೂ ಯಾವುದೇ ಸಿದ್ಧತೆ ಕಾಣುತ್ತಿಲ್ಲ. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್, ಮುಖಂಡ ಸಿ.ಆರ್.ಉಮೇಶ್, ಪ್ರಧಾನ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಬಿ.ಸತ್ಯನಾರಾಯಣ ಪುತ್ರ ಬಿ.ಎಸ್. ಸತ್ಯಪ್ರಕಾಶ್ ಟಿಕೆಟ್‌‌ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಟಿಕೆಟ್‌ ಹಂಚಿಕೆ ಗೊಂದಲ ಮುಂದುವರಿದಿದೆ.

ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ವಿರುದ್ಧ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಅವಿಶ್ವಾಸ ಮಂಡಿಸಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ತಾಲ್ಲೂಕಿನ ಜೆಡಿಎಸ್‌ ಸದಸ್ಯರು ಸಹಿ ಮಾಡಿರುವುದು ಪಕ್ಷದೊಳಗಿನ ಬಣ ರಾಜಕೀಯ ತೀವ್ರಗೊಂಡಿದೆ.

ಹೇಗಾದರೂ ಸರಿ ಈ ಉಪಚುನಾವಣೆಯನ್ನು ಗೆಲ್ಲಲೇ ಬೇಕು ಎಂದು ಕಸರತ್ತು ನಡೆಸಿರುವ ಬಿಜೆಪಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿದೆ. ದೇವಾಲಯಗಳಿಗೆ ₹ 1.70 ಕೋಟಿ ಬಿಡುಗಡೆ ಮಾಡಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಈಗಾಗಲೇ ಬೂತ್ ಮಟ್ಟದ ಕಮಿಟಿಗಳನ್ನು ರಚಿಸಲಾಗಿದೆ. ಸಚಿವರಾದ ಆರ್.ಆಶೋಕ್, ಆನಂದಸಿಂಗ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಈಗಾಗಲೇ ಇಲ್ಲಿಗೆ ಭೇಟಿ ನೀಡಿ ಸಂಘಟನೆ ಚುರುಕುಗೊಳಿಸಿದ್ದಾರೆ. ಆದರೆ, ಟಿಕೆಟ್‌ ಗೊಂದಲ ಮಾತ್ರ ಮುಂದುವರೆದಿದೆ. ಇದುವರೆಗೆ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಸಿ.ಎಂ.ರಾಜೇಶ್ ಗೌಡ ಅವರನ್ನು ಬಿಜೆಪಿಗೆ ಕರೆ ತಂದು ಟಿಕೆಟ್‌ ನೀಡುವ ಸಾಧ್ಯತೆ ಇದೆ.

ಬಿಜೆಪಿಯ ಯಾವ ಬಣಕ್ಕೆ ಟಿಕೆಟ್‌?

ಪ್ರಸ್ತುತ ಬಿಜೆಪಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಹಾಗೂ ತುಮುಲ್ ನಿರ್ದೇಶಕ ಎಸ್.ಆರ್. ಗೌಡ ನೇತೃತ್ವದ ಎರಡು ಬಣಗಳಿವೆ. ಇಬ್ಬರೂ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ ಇಬ್ಬರ ನಡುವಿನ ಕಿತ್ತಾಟ ಮೂರನೇಯವರಿಗೆ ಲಾಭವಾಗುವ ಸೂಚನೆಗಳಿವೆ. ಪಕ್ಷಕ್ಕೆ ಹೊರಗಿನಿಂದ ಬೇರೆಯವರನ್ನು ಕರೆತಂದು ಹೊಸ ಮುಖಕ್ಕೆ ಟಿಕೆಟ್‌ ನೀಡಬೇಕು ಎನ್ನುವ ಚಿಂತನೆ ಪಕ್ಷದಲ್ಲಿ ನಡೆಯುತ್ತಿದೆ. ಆದರೆ, ಇದಕ್ಕೆ ಪಕ್ಷದ ಸ್ಥಳೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.