ADVERTISEMENT

ಕುಣಿಗಲ್: ಸಮರ್ಪಕವಿಲ್ಲ 10 ಫಲಾನುಭವಿಗಳ ದಾಖಲೆಗಳು

ವಸತಿ ಯೋಜನೆ; 1,136 ಫಲಾನುಭವಿಗಳಿಗೆ ಬರಬೇಕಿದೆ ₹6 ಕೋಟಿ

ಟಿ.ಎಚ್.ಗುರುಚರಣ್ ಸಿಂಗ್
Published 23 ಆಗಸ್ಟ್ 2020, 19:30 IST
Last Updated 23 ಆಗಸ್ಟ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕುಣಿಗಲ್: ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲ್ಲೂಕಿನ ವಸತಿ ಯೋಜನೆಗಳ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಶಾಸಕ ಡಾ.ರಂಗನಾಥ್ ನಡುವೆ ವಾಕ್ಸಮರ ನಡೆದು ವಿವಾದ ಉಂಟಾದ ಪ್ರಯುಕ್ತ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ‘ವಸತಿ ಯೋಜನೆಗಳ’ ಕಾಮಗಾರಿ ಪರಿಶೀಲನೆ ನಡೆದಿದೆ.

ತಾಲ್ಲೂಕಿನ ಫಲಾನುಭವಿಗಳಿಗೆ ಸರ್ಕಾರದ ವಿವಿಧ ವಸತಿ ಯೋಜನೆಗಳಿಂದ ಹತ್ತು ವರ್ಷಗಳಿಂದ ಸುಮಾರು ₹6 ಕೋಟಿ ಹಣ ಬರಬೇಕಾಗಿದೆ. ಒಟ್ಟು ಹತ್ತು ಫಲಾನುಭವಿಗಳ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಅವ್ಯವಹಾರ ನಡೆದಿರುವುದು ಖಚಿತವಾಗಿದೆ.

ಬೇಗೂರು ಗ್ರಾಮ ಪಂಚಾಯಿತಿಯಲ್ಲಿ ನಿವೃತ್ತ ಶಿಕ್ಷಕ ರಾಮಯ್ಯ ಅವರ ಪತ್ನಿ ಶಾಂತಮ್ಮ ಅವರಿಗೆ ಮನೆ ನೀಡಿದ್ದು, ಅವರಿಗೆ ಬಿಡುಗಡೆಯಾದ ಅನುದಾನ ₹1,19,800 ವಸೂಲಾತಿಗೆ, ಬಿಳಿದೇವಾಲಯ ಗ್ರಾಮ ಪಂಚಾಯಿತಿಯ ಸಮೀನಾ ಎಂಬುವವರು ಮನೆ ನಿರ್ಮಿಸದೆ ಬೇರೆಯವರ ಮನೆಯನ್ನು ಜಿಪಿಎಸ್ ಮಾಡಿ ಪಡೆದಿದ್ದ ₹59,800 ಹಣ ವಸೂಲಿ ಮಾಡಲು, ಹಳೇವೂರು ಗ್ರಾಮ ಪಂಚಾಯಿತಿಯ ಹನುಮಮ್ಮ ಅವರು 2010-11ನೇ ಸಾಲಿನಲ್ಲಿ ಅನುದಾನ ಪಡೆದಿದ್ದು, ಎರಡನೇ ಬಾರಿ ಅನುಮೋದನೆಗೊಂಡು ಪಡೆದಿದ್ದ ಅನುದಾನ ₹37,300 ವಸೂಲಾತಿಗೆ ನೋಟಿಸ್ ನೀಡಲಾಗಿದೆ ಎಂದು ವಸತಿ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಿಳಿದೇವಾಲಯ ಪಂಚಾಯಿತಿಯ ಕರೀಂಖಾನ್, ಪಾಂಡು ರಂಗಯ್ಯ, ಗಂಗಣ್ಣ, ಬಷೀರ್ ಖಾನೆ ಅವರು ಬೇರೆಯವರ ಪಾಯವನ್ನು ತಪ್ಪಾಗಿ ಜಿಪಿಎಸ್ ಮಾಡಿದ್ದಾರೆ. ಲಕ್ಷಮ್ಮ ಅವರು ಸರ್ಕಾರಿ ಉದ್ಯೋಗಿಯ ಎರಡನೆ ಪತ್ನಿ ಆಗಿದ್ದರೂ ಮನೆ ಮಂಜೂರಾಗಿದೆ. ಹುತ್ರಿದುರ್ಗ ಜಯಮ್ಮ ಅವರು 2ನೇ ಬಾರಿಗೆ ಅನುದಾನ ಪಡೆದಿದ್ದಾರೆ. ಮಡಕೆಹಳ್ಳಿ ಲೀಲಾವತಿ, ಒಂದೇ ಮನೆಗೆ ಎರಡು ಯೋಜನೆಯ ಅನುದಾನ ಬಿಡುಗಡೆ ಆಗಿರುವುದರಿಂದ ಸೂಕ್ತ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ವಸತಿ ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹತ್ತು ವರ್ಷಗಳಲ್ಲಿ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಿಗೆ ವಿವಿಧ ವಸತಿ ಯೋಜನೆಗಳಿಂದ 15,167 ಮನೆಗಳು ಮಂಜೂರಾಗಿವೆ. 9,591 ಮನೆಗಳು ಪೂರ್ಣಗೊಂಡಿವೆ. 1089 ಪಾಯ, 199 ಲಿಂಟಲ್, 616 ಚಾವಣಿ ಹಂತದಲ್ಲಿವೆ. 3,255 ಮನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಕಾರಣ ಕಪ್ಪುಪಟ್ಟಿಗೆ ಸೇರಿಸಲಾಗಿದೆ.

1,136 ಫಲಾನುಭವಿಗಳಿಗೆ ₹5.92 ಕೋಟಿ ಬಿಡುಗಡೆ ಆಗಬೇಕಿದೆ. ಇದರಲ್ಲಿ ಸಂಸದರ ಆದರ್ಶ ಗ್ರಾಮ ಪಂಚಾಯಿತಿ ಮಡಕೆಹಳ್ಳಿ ಪಂಚಾಯಿತಿಯ 87 ಫಲಾನುಭವಿಗಳಿಗೆ ₹37,34,100, ಬೇಗೂರು ಗ್ರಾಮ ಪಂಚಾತಿಯ 65 ಫಲಾನುಭವಿಗಳಿಗೆ ₹37,74,750, ಯಲಿಯೂರು ಪಂಚಾಯಿತಿಯ 63 ಫಲಾನುಭವಿಗಳಿಗೆ ₹34, 67,494 ಹಾಗೂ ತಾವರೆಕೆರೆಯ 54 ಮತ್ತು ನಾಗಸಂದ್ರದ 54 ಫಲಾನುಭವಿಗ ಸೇರಿದಂತೆ ಇನ್ನೂ ಹಲವಾರು ಫಲಾನುಭವಿಗಳಿಗೆ ಹಣ ಬರಬೇಕಿದೆ.

ವಂಚನೆ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಲಿ
ತಾಲ್ಲೂಕಿನ ವಸತಿ ಯೋಜನೆಯಲ್ಲಿ ಜನರಿಗಾಗಲಿ, ಶಾಸಕನಾಗಿ ನಾನಾಗಲೀ ವಂಚನೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ದಾಖಲೆಗಳಿಲ್ಲದೆ ಆರೋಪ ಮಾಡಿದ್ದಾರೆ. ಕ್ಷೇತ್ರಕ್ಕೆ ಕಳೆದ ಸಾಲಿನಲ್ಲಿ ಒಂದು ಸಾವಿರ ಮನೆಗಳು ಮಂಜೂರಾಗಿದ್ದವು. ಸರ್ಕಾರ ಹಿಂಪಡೆದಿದೆ. ತಮ್ಮ ಅವಧಿಯಲ್ಲಿ ಮನೆಗಳು ಮಂಜೂರಾಗದಿದ್ದರೂ ನಾವು ವಂಚನೆ ಮಾಡಿರುವುದಾಗಿ ಸಚಿವರು ಆರೋಪಿಸಿದ್ದಾರೆ. ಈಗ ಯೋಜನಾ ನಿರ್ದೇಶಕರಿಂದ ಪರಿಶೀಲನೆ ಮಾಡಿಸಿದ್ದಾರೆ. ಖಚಿತ ಮಾಹಿತಿ ಅಂಕಿ ಅಂಶಗಳು ಸಿಕ್ಕಿದೆ. ಇನ್ನಾದರೂ ಕುಣಿಗಲ್ ಶಾಸಕರ ಮತ್ತು ಜನರ ಬಗ್ಗೆ ಇರುವ ಧೋರಣೆಯನ್ನು ಸಚಿವರು ಬದಲಿಸಿಕೊಳ್ಬೇಕು. ವಸತಿ ಯೋಜನೆಯಲ್ಲಿ ವಂಚನೆ ಮಾಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಬಾಕಿ ಉಳಿದಿರುವ ₹6 ಕೋಟಿ ಬಿಡುಗಡೆಗೆ ಗಮನ ಹರಿಸಲಿ.
-ಡಾ.ರಂಗನಾಥ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.