ADVERTISEMENT

10 ಸಾವಿರ ಖಾಸಗಿ ಶಾಲೆಗಳಿಗೆ ಬೀಗ?

ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಆತಂಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 2:53 IST
Last Updated 25 ನವೆಂಬರ್ 2020, 2:53 IST

ತುಮಕೂರು: ರಾಜ್ಯ ಸರ್ಕಾರ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಮುಚ್ಚಿಸಲು ಹೊರಟಿದ್ದು, ಇದರಿಂದ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಇಲ್ಲಿ ಮಂಗಳವಾರ ಆತಂಕ ವ್ಯಕ್ತಪಡಿಸಿದರು.

ಸರ್ಕಾರದ ಹೊಸ ಸುತ್ತೋಲೆಯ ಪ್ರಕಾರ ಖಾಸಗಿ ಶಾಲೆಗಳನ್ನು ನವೀಕರಣಗೊಳಿಸಲು ಸಾಧ್ಯವಾಗದೆ ಮುಚ್ಚಬೇಕಾಗುತ್ತದೆ. ಅಂತಹ ಸಂದರ್ಭ ಎದುರಾದರೆ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಶಾಲೆಗಳು ಮುಚ್ಚಲಿವೆ. ಬಡವರು, ಕೂಲಿ ಕಾರ್ಮಿಕರ ಮಕ್ಕಳು ಇಂತಹ ಶಾಲೆಗಳಲ್ಲಿ ಓದದಂತೆ ತಡೆಯುವ ಹುನ್ನಾರ ನಡೆದಿದೆ. ತಕ್ಷಣವೇ ಹೊಸ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಬಡವರು, ಮಧ್ಯಮ ವರ್ಗಕ್ಕೆ ಸೇರಿದ ಮಕ್ಕಳು ಓದಲು ನೆರವಾಗುವಂತೆ ಖಾಸಗಿ ಶಾಲೆಗಳನ್ನು ತೆರೆಯಲು ಹತ್ತಾರು ಷರತ್ತುಗಳನ್ನು ವಿಧಿಸುವ ಮೂಲಕ ಕಾರ್ಪೋರೇಟ್ ಹಾಗೂ ಖಾಸಗಿ ಶಾಲೆಗಳ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಲಕ್ಷಾಂತರ ರೂಪಾಯಿ ಡೊನೇಷನ್ ಪಡೆಯುವ, ಈಗಾಗಲೇ ಈ ವರ್ಷದ ಶುಲ್ಕ ವಸೂಲಿ ಮಾಡಿರುವ ಸಿಬಿಎಸ್‌ಸಿ, ಐಸಿಎಸ್‌ಇ ಶಾಲೆಗಳ ಆಡಳಿತ ಮಂಡಳಿಗಳ ಮರ್ಜಿಗೆ ಶಿಕ್ಷಣ ಸಚಿವರು ಒಳಗಾಗಿದ್ದಾರೆ. ಇನ್ನೂ ಪಠ್ಯಕ್ರವನ್ನೇ ಪ್ರಕಟಿಸದ ಬಡ ಮಕ್ಕಳು ಕಲಿಯುತ್ತಿರುವ, ರಾಜ್ಯ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಈಡೇರಿಸಲಾಗದ ಷರತ್ತುಗಳನ್ನು ವಿಧಿಸಲಾಗಿದೆ. ಇದರಿಂದ ಶೇ 60ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಆರೋಪಿಸಿದರು.

ADVERTISEMENT

ರಾಜ್ಯದಲ್ಲಿ ಸುಮಾರು 65 ಸಾವಿರ ಶಾಲೆಗಳಿವೆ. ಸಿಬಿಎಸ್‌ಸಿ, ಐಸಿಎಸ್‌ಇ ಪಠ್ಯಕ್ರಮ ಬೋಧಿಸುವ ಶಾಲೆಗಳನ್ನು ಹೊರತುಪಡಿಸಿದರೆ ರಾಜ್ಯ ಪಠ್ಯಕ್ರಮದಲ್ಲಿ ಕಲಿಯುತ್ತಿರುವ ಸುಮಾರು 50 ಲಕ್ಷ ಮಕ್ಕಳಿಗೆ ಈವರೆಗೂ ಸರ್ಕಾರ ಪಠ್ಯಕ್ರಮವನ್ನೇ ನಿಗದಿಪಡಿಸಿಲ್ಲ. ಆನ್‌ಲೈನ್ ಪಾಠ ಕೇಳಿರುವ ಶೇ 8ರಷ್ಟು ಮಕ್ಕಳನ್ನು ಮುಂದಿಟ್ಟುಕೊಂಡು ಪರೀಕ್ಷೆ ನಡೆಸಲು ಮುಂದಾಗಿರುವುದು ಮಕ್ಕಳು, ಪೋಷಕರಲ್ಲಿ ಆತಂಕ ಉಂಟುಮಾಡಿದೆ ಎಂದು ಹೇಳಿದರು.

ಖಾಸಗಿ ಶಾಲೆಗಳಲ್ಲಿ 5 ಲಕ್ಷ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣ ಸಚಿವರ ಹೊಸ ನಿರ್ಧಾರದಿಂದಾಗಿ ಶಿಕ್ಷಕರ ಮೇಲೂ ಪರಿಣಾಮ ಬೀರಲಿದೆ. ಖಾಸಗಿ ಶಾಲೆ ಮಕ್ಕಳ ಮೇಲೆ ತೋರುವ ಪ್ರೀತಿಯನ್ನು ಸರ್ಕಾರಿ ಶಾಲೆ ಮಕ್ಕಳ ಮೇಲೆ ತೋರುತ್ತಿಲ್ಲ. ಕಟ್ಟಡಗಳು ಶಿಥಿಲಗೊಂಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಮೂಲ ಸೌಕರ್ಯಗಳು ಇರುವುದಿಲ್ಲ. ಸರ್ಕಾರಿ ಶಾಲೆಗೆ ಸೌಕರ್ಯ ಕಲ್ಪಿಸುವ ಬದಲು ಖಾಸಗಿ
ಶಾಲೆಗಳ ಮೇಲೆ ಸಚಿವರು ಗದಾಪ್ರಹಾರ ನಡೆಸಿದ್ದಾರೆ ಎಂದು ದೂರಿದರು.

ಸಂಘದ ಕಾರ್ಯಾಧ್ಯಕ್ಷ ಹಾಲನೂರು ಲೇಪಾಕ್ಷ, ‘ಖಾಸಗಿ ಅನುದಾನಿತ ಶಾಲೆಗಳ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ನಮ್ಮನ್ನು ಸಮಾಧಿ ಮಾಡಲು ಸರ್ಕಾರ ಹೊರಟಿದೆ. ಹೊಸ ನಿಯಮ ಅನುಸರಿಸಿದರೆ ಸಾವಿರಾರು ಸಂಖ್ಯೆಯ ಶಾಲೆಗಳು ಮುಚ್ಚಲಿವೆ’ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀನಿವಾಸ್,ಲ್ಯಾನ್ಸಿ ಪಾಯಸ್, ಚಂದ್ರಶೇಖರ್, ಅರುಣ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.