ADVERTISEMENT

156 ಸ್ಥಾನಗಳಿಗೆ ಅವಿರೋಧ ಆಯ್ಕೆ

168 ಗ್ರಾ.ಪಂ.ಗಳ 2,786 ಸ್ಥಾನಗಳಿಗೆ ಮೊದಲ ಹಂತದಲ್ಲಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 1:34 IST
Last Updated 16 ಡಿಸೆಂಬರ್ 2020, 1:34 IST

ತುಮಕೂರು: ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದ್ದು, ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಐದು ತಾಲ್ಲೂಕುಗಳಲ್ಲಿ 156 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ನಾಮಪತ್ರಗಳನ್ನುವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. 168 ಗ್ರಾ.ಪಂ.ಗಳ 2,786 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು, ಅದರಲ್ಲಿ 156 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಕೆಲವು ಸ್ಥಾನಗಳಿಗೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರೆ, ಕೆಲವು ಕ್ಷೇತ್ರಗಳಿಗೆ ಎರಡಕ್ಕಿಂತ ಹೆಚ್ಚು ಮಂದಿ ಸ್ಪರ್ಧಿಸಿದ್ದರು. ಪ್ರತಿಸ್ಪರ್ಧಿಗಳ ಮನವೊಲಿಸಿ ನಾಮಪತ್ರ ವಾಪಸ್ ತೆಗೆಸುವ ಮೂಲಕ ಅವಿರೋಧ ಆಯ್ಕೆಗೆ ತೆರೆಮರೆಯಲ್ಲಿ ಪ್ರಯತ್ನಗಳು ನಡೆದಿದ್ದವು.

ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಹರಾಜು ಹಾಕಲಾಗಿದೆ ಎಂಬ ಸಾಕಷ್ಟು ಆರೋಪಗಳು ಕೇಳಿಬಂದಿದ್ದ ಕುಣಿಗಲ್ ತಾಲ್ಲೂಕಿನಲ್ಲಿ 37 ಸ್ಥಾನಗಳಿಗೆ ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ ಅತಿಹೆಚ್ಚು 65 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ತುಮಕೂರು ತಾಲ್ಲೂಕಿನಲ್ಲಿ 13, ಪಾವಗಡ 16, ಕೊರಟಗೆರೆ ತಾಲ್ಲೂಕಿನಲ್ಲಿ 25
ಮಂದಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.‌‌

ADVERTISEMENT

ತುಮಕೂರು, ಕುಣಿಗಲ್, ಪಾವಗಡ ತಾಲ್ಲೂಕಿನಲ್ಲಿ ಗ್ರಾ.ಪಂ ಸದಸ್ಯ ಸ್ಥಾನಗಳನ್ನು ಹರಾಜು ಹಾಕಲಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ, ಸದಸ್ಯ
ಸ್ಥಾನಗಳ ಖರೀದಿಯನ್ನು ತಡೆಯುವ ಪ್ರಯತ್ನ ನಡೆಸಿದ್ದರು. ಆದರೂ ಕೆಲವು ಕಡೆಗಳಲ್ಲಿ ಗುಪ್ತವಾಗಿ ಹರಾಜು ನಡೆದಿದೆ. ಈ ವಿಚಾರವನ್ನು
ಗ್ರಾಮದ ಜನರು ಹೊರಕ್ಕೆ ಬಿಟ್ಟುಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

‘ಹರಾಜು ಹಾಕಿದರೆ ಅದಕ್ಕೆ ಕಾರಣರಾದವರನ್ನು ಗಡಿಪಾರು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದರು. ಹರಾಜು ನಡೆದಿದ್ದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಮತ್ತೊಂದು ಮಾರ್ಗ ಕಂಡುಕೊಂಡಿ
ದ್ದಾರೆ. ಅವಿರೋಧ ಆಯ್ಕೆಯಾದರೆ ಅನುಮಾನ ಬರಬಹುದು ಎಂಬ ಕಾರಣಕ್ಕೆ ಖರೀದಿಸಿದವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಂತಹವರ ಎದುರು ತೀರ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಿದ್ದು, ಇಂತಹವರಿಗೆ ವೊಟು ಹಾಕಬೇಕು ಎಂದು ಗ್ರಾಮದ ಮುಖಂಡರು ನಿರ್ದೇಶನ ನೀಡಿದ್ದಾರೆ
ಎನ್ನಲಾಗಿದೆ.

ಬಹಿಷ್ಕಾರ: ಗುಬ್ಬಿ ತಾಲ್ಲೂಕಿನ ಮಂಚಲದೊರೆ ಮಠದ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಮಂಚಲದೊರೆ, ಅಂಕಸಂದ್ರ ಗ್ರಾ.ಪಂ ವ್ಯಾಪ್ತಿಯಲ್ಲಿ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ. ಈ ಎರಡು ಗ್ರಾ.ಪಂ ವ್ಯಾಪ್ತಿಯ 36 ಸ್ಥಾನಗಳಿಗೆ ಯಾರೊಬ್ಬರೂ ನಾಮಪತ್ರ
ಸಲ್ಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.