ADVERTISEMENT

ಒಟಿಪಿ ನೀಡದಿದ್ದರೂ ₹17 ಲಕ್ಷ ವರ್ಗಾವಣೆ: ನಿವೃತ್ತ ನೌಕರನ ಖಾತೆಯಿಂದ ಹಣ ಕಡಿತ

ಮಧ್ಯರಾತ್ರಿ ಹಣ ಕಡಿತದ ಸಂದೇಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:28 IST
Last Updated 4 ಆಗಸ್ಟ್ 2025, 7:28 IST
ಸೈಬರ್‌
ಸೈಬರ್‌   

ತುಮಕೂರು: ಯಾವುದೇ ಒಟಿಪಿ ಹೇಳದಿದ್ದರೂ, ಯಾರ ಜತೆಯೂ ಬ್ಯಾಂಕ್‌ ಖಾತೆಯ ವಿವರ ಹಂಚಿಕೊಳ್ಳದಿದ್ದರೂ ರೇಷ್ಮೆ ಇಲಾಖೆ ನಿವೃತ್ತ ನೌಕರ ಸಿ.ಇ.ನಾಗರಾಜು ಅವರ ಖಾತೆಯಿಂದ ಮಧ್ಯರಾತ್ರಿ ₹17 ಲಕ್ಷ ಹಣ ವರ್ಗಾವಣೆಯಾಗಿದೆ.

ಸೈಬರ್‌ ಅಪರಾಧ ಪ್ರಕರಣಗಳು ದಿನೇ ದಿನೇ ಹೊಸ ರೂಪ ಪಡೆಯುತ್ತಿವೆ. ಲಿಂಕ್‌ ಕಳುಹಿಸಿ ವಂಚಿಸುವುದು, ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ಬೆದರಿಸಿ ಹಣ ಪೀಕುವುದು, ಪಾರ್ಟ್‌ ಟೈಮ್‌ ಕೆಲಸ ಆಮಿಷವೊಡ್ಡಿ ಹಣ ವರ್ಗಾವಣೆ ಮಾಡುವ ಪ್ರಕರಣಗಳು ಹೆಚ್ಚಾಗಿದ್ದವು. ಈಗ ಮೊಬೈಲ್‌ಗೆ ಯಾವುದೇ ಒಟಿಪಿ ಬಾರದಿದ್ದರೂ, ಒಟಿಪಿ ಬಂದರೂ ಅದನ್ನು ಯಾರ ಜತೆಗೂ ಹಂಚಿಕೊಳ್ಳದವರ ಖಾತೆಯಿಂದಲೂ ಹಣ ಕಡಿತವಾಗುತ್ತಿದೆ.

ಸಿ.ಇ.ನಾಗರಾಜು ಅವರಿಗೂ ಇದೇ ರೀತಿಯಲ್ಲಿ ವಂಚಿಸಲಾಗಿದೆ. ಜುಲೈ 31ರಂದು ಮಧ್ಯರಾತ್ರಿ 12.17ರಿಂದ 1 ಗಂಟೆಯ ವರೆಗೆ ಅವರ ಮೊಬೈಲ್‌ಗೆ ನಿರಂತರವಾಗಿ ಮೆಸೇಜ್‌ಗಳು ಬಂದಿವೆ. ನಿದ್ದೆಯಿಂದ ಎಚ್ಚರಗೊಂಡು ಮೊಬೈಲ್‌ ಪರಿಶೀಲಿಸಿದಾಗ ಅವರ ಖಾತೆಯಿಂದ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿರುವುದು ಗಮನಕ್ಕೆ ಬಂದಿದೆ.

ADVERTISEMENT

₹5 ಲಕ್ಷ, ₹50 ಸಾವಿರ, ₹98 ಸಾವಿರ ಹೀಗೆ 6 ಬಾರಿ ಒಟ್ಟು ₹17 ಲಕ್ಷ ಹಣ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಕೂಡಲೇ ಬ್ಯಾಂಕ್‌ ಸಹಾಯವಾಣಿ ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ವಂಚಕರನ್ನು ಪತ್ತೆ ಹಚ್ಚಿ, ಹಣ ವಾಪಸ್‌ ಕೊಡಿಸುವಂತೆ ಸಿ.ಇ.ನಾಗರಾಜು ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.