ತುಮಕೂರು: ‘ಮೀಶೊ ವತಿಯಿಂದ ₹14.75 ಲಕ್ಷ ವಿಜೇತರಾಗಿದ್ದೀರಿ’ ಎಂದು ನಂಬಿಸಿ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯ ಜಿ.ಮಂಜುನಾಥ ಅವರಿಗೆ ₹18.09 ಲಕ್ಷ ವಂಚಿಸಲಾಗಿದೆ.
ಮಂಜುನಾಥ ವಿಳಾಸಕ್ಕೆ ‘ಮೀಶೊ’ದಿಂದ ಅಂಚೆ ಮೂಲಕ ಪೋಸ್ಟ್ ತಲುಪಿದೆ. ಅದರಲ್ಲಿನ ಸ್ಕ್ರ್ಯಾಚ್ ಕಾರ್ಡ್‌ನಲ್ಲಿ ‘ನೀವು ₹14.75 ಲಕ್ಷ ಹಣ ವಿಜೇತರಾಗಿದ್ದೀರಿ’ ಎಂಬ ಮಾಹಿತಿ ಇತ್ತು. ಪೋಸ್ಟ್‌ನಲ್ಲಿದ್ದ ಸಂತೋಷ್ ಕುಮಾರ್ ಎಂಬುವರ ಮೊಬೈಲ್ ಸಂಖ್ಯೆ ಸಂಪರ್ಕಿಸಿದಾಗ ‘ವಿಜೇತರಾದ ಹಣ ಪಡೆಯಲು ನೀವು ದೆಹಲಿಗೆ ಬರಬೇಕು, ಬರಲು ಆಗದಿದ್ದರೆ ಆನ್‌ಲೈನ್ ಮುಖಾಂತರ ಹಣ ಪಾವತಿಸಲಾಗುವುದು. ಆಧಾರ್ ಕಾರ್ಡ್ ಮತ್ತು ಅಂಚೆ ಮುಖಾಂತರ ಬಂದಿರುವ ಸ್ಕ್ರ್ಯಾಚ್ ಕಾರ್ಡ್‌ಅನ್ನು ವಾಟ್ಸ್ ಆ್ಯಪ್‌ನಲ್ಲಿ ಕಳುಹಿಸಿ’ ಎಂದು ತಿಳಿಸಿದ್ದಾರೆ.
ಮೊದಲಿಗೆ ಪ್ರೊಸೆಸಿಂಗ್ ಶುಲ್ಕವಾಗಿ ₹14,345 ಹಣವನ್ನು ಫೋನ್ ಪೇ ಮೂಲಕ ಪಡೆದಿದ್ದಾರೆ. ನಂತರ ಬೇರೆ ಬೇರೆ ಕಾರಣ ನೀಡಿ ‘ನಿಮಗೆ ಬಹುಮಾನದ ಹಣ ಬೇಕಾದರೆ ನಾವು ಕೇಳಿದಷ್ಟು ಹಣ ವರ್ಗಾವಣೆ ಮಾಡಿ’ ಎಂದು ಹೇಳಿದ್ದಾರೆ. ಮಂಜುನಾಥ್ ತಮ್ಮ ಗೆಳೆಯರು ಮತ್ತು ಪತ್ನಿಯ ಖಾತೆಗಳಿಂದ ಸೈಬರ್ ವಂಚಕರು ತಿಳಿಸಿದ ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಹಂತ ಹಂತವಾಗಿ ₹18,09,050 ವರ್ಗಾಯಿಸಿದ್ದಾರೆ.
ಈಗ ಹಣ ಕೇಳಲು ಕರೆ ಮಾಡಿದರೆ ಮೊಬೈಲ್ ಸ್ವಿಚ್ಡ್ ಆಫ್ ಎಂದು ಬರುತ್ತಿದೆ. ಮೋಸ ಮಾಡಿದವರನ್ನು ಪತ್ತೆ ಹಚ್ಚುವಂತೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.