ADVERTISEMENT

ತುಮಕೂರು ವಿಭಾಗದಲ್ಲಿಸಾರಿಗೆ ಸಂಸ್ಥೆಗೆ ₹40 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 17:53 IST
Last Updated 22 ಜೂನ್ 2021, 17:53 IST
ಬಸ್
ಬಸ್   

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು, ತುಮಕೂರು ವಿಭಾಗದಲ್ಲಿ ಸುಮಾರು ₹40 ಕೋಟಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಪ್ರತಿ ದಿನವೂ ₹65 ಲಕ್ಷ ನಷ್ಟ ಉಂಟಾಗಿದೆ.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಒಂದಾದ ಮೇಲೆ ಒಂದು ಸಮಸ್ಯೆಗಳ ಸುಳಿಗೆ ಸಂಸ್ಥೆ ಸಿಲುಕಿಕೊಂಡಿದ್ದು, ಚೇತರಿಕೆಗೆ ಹರಸಾಹಸ ಮಾಡುತ್ತಿದೆ. ಕಳೆದ ವರ್ಷದ ಮಾರ್ಚ್‌ನಿಂದ ಆರಂಭವಾದ ಸಂಕಷ್ಟಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಕೋವಿಡ್ ಮೊದಲನೇ ಅಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ನಂತರ ಸಂಸ್ಥೆ ಸಿಬ್ಬಂದಿ ಪ್ರತಿಭಟನೆಯಿಂದ ಬಸ್‌ಗಳು ಡಿಪೊ ಬಿಟ್ಟು ಹೊರಗೆ ಬರಲಿಲ್ಲ. ಎರಡನೇ ಬಾರಿಗೆ ಎರಡು ವಾರಗಳ ಕಾಲ ನೌಕರರು ಪ್ರತಿಭಟನೆ ನಡೆಸಿದರು. ಕೋವಿಡ್ ಎರಡನೇ ಅಲೆಯಲ್ಲಿ ಮತ್ತೆ ಬಸ್ ಸಂಚಾರ ಬಂದ್ ಮಾಡಲಾಯಿತು.

ಹೀಗೆ ಸದಾ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದೆ. ಕೋವಿಡ್ ಎರಡನೇ ಅವಧಿಯ ಲಾಕ್‌ಡೌನ್ ತೆರವಾಗಿದ್ದರೂ ಬಸ್ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಈ ಅವಧಿಯಲ್ಲಿ ಸುಮಾರು ₹40 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ಮಾರ್ಚ್‌ನಿಂದ ಈವರೆಗಿನ ಒಟ್ಟು ನಷ್ಟ ಲೆಕ್ಕಾಚಾರ ಹಾಕಿದರೆ (ಪ್ರತಿಭಟನೆ ಸಮಯ ಸೇರಿ) ₹100 ಕೋಟಿಗೆ ಸಮೀಪಿಸುತ್ತದೆ. ಕಳೆದ ಒಂದುವರೆ ವರ್ಷದಲ್ಲಿ ಸಂಸ್ಥೆಯು ಆದಾಯ ಕಂಡಿದ್ದಕ್ಕಿಂತ ನಷ್ಟ ಅನುಭವಿಸಿದ್ದೇ ಹೆಚ್ಚು.

ADVERTISEMENT

ಕೋವಿಡ್ ಲಾಕ್‌ಡೌನ್ ತೆರವಾಗಿ ಬಸ್ ಸಂಚಾರಕ್ಕೆ ಅವಕಾಶ ನೀಡಿದ್ದರೂ ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ. ಜಿಲ್ಲೆಯ ಎಲ್ಲಾ ಡಿಪೊಗಳು ಸೇರಿದಂತೆ ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ 580 ಬಸ್‌ಗಳು ಸಂಚರಿಸುತ್ತಿದ್ದವು. ಸೋಮವಾರ ಕೇವಲ 261 ಬಸ್‌ಗಳು ಮಾತ್ರ ಸಂಚರಿಸಿವೆ. ಮಂಗಳವಾರ ಸಹ ಅಷ್ಟೇ ಸಂಖ್ಯೆಯಲ್ಲಿ ಕಾರ್ಯಾಚರಣೆ ನಡೆಸಿವೆ. ಅಂದರೆ ಇನ್ನೂ ಅರ್ಧದಷ್ಟು ಬಸ್‌ಗಳು ರಸ್ತೆಗೆ ಇಳಿದಿಲ್ಲ. ಈಗಲೂ ಪೂರ್ಣ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ಜತೆಗೆ ಒಟ್ಟು ಸಾಮರ್ಥ್ಯದ ಅರ್ಧಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕಿದ್ದು, ಮತ್ತೆ ನಷ್ಟವೇ ಆಗುತ್ತಿದೆ.

ಬೆಂಗಳೂರು ಕಡೆಗೆ, ಜಿಲ್ಲಾ ಕೇಂದ್ರದಿಂದ ತಾಲ್ಲೂಕುಗಳಿಗೆ, ಕೆಲವು ಕಡೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಬಸ್‌ಗಳು ಸಂಚರಿಸಿವೆ. ಬೇಡಿಕೆ ಆಧರಿಸಿ ಬಸ್ ಸಂಚಾರವನ್ನು ಪ್ರಾರಂಭಿಸಲಾಗುತ್ತಿದೆ. ಬೇಡಿಕೆ, ಪ್ರಯಾಣಿಕರು ಇಲ್ಲದೆ ಬಸ್‌ಗಳು ಸಂಚರಿಸಿದರೆ ಸಂಸ್ಥೆ ನಷ್ಟ ಅನುಭವಿಸಬೇಕಾಗುತ್ತದೆ. ಅಗತ್ಯ ಇರುವ ಮಾರ್ಗಗಳಲ್ಲಿ ಮಾತ್ರ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.