ADVERTISEMENT

ಯುವಕರ ಬದುಕು ಬದಲಾಯಿಸಬಲ್ಲ ಶ್ರೇಷ್ಠ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 6:05 IST
Last Updated 13 ಜನವರಿ 2018, 6:05 IST

ತುಮಕೂರು: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹೆಸರಿನಲ್ಲಿ ನಡೆಯುವ ಯುವ ದಿನಾಚರಣೆ ಯುವಕರ ಬದುಕು ಬದಲಾಯಿಸಬಲ್ಲ ಶ್ರೇಷ್ಠ ದಿನಾಚರಣೆಯಾಗಿದೆ. ಸ್ವಾತಂತ್ರ್ಯ ದಿನಾಚರಣೆಯಷ್ಟೇ ಈ ದಿನಾಚರಣೆಯೂ ಬಹುಮುಖ್ಯವಾದುದು ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ಎನ್‌ಎಸ್ಎಸ್ ಘಟಕದ ಆಶ್ರಯದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

’ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಿಗೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿಯ ಸೆಲೆಯಾಗಿದ್ದರು. ರವೀಂದ್ರನಾಥ್ ಟ್ಯಾಗೋರ್, ಮಹಾತ್ಮ ಗಾಂಧೀಜಿ ಅವರು ವಿವೇಕಾನಂದರ ಚಿಂತನೆಗೆ ಪ್ರಭಾವಿತರಾಗಿದ್ದರು’ ಎಂದರು.

ADVERTISEMENT

’ವಿಶ್ವವಿದ್ಯಾಲಯಗಳು ಯೋಗ್ಯತಾ ಪ್ರಮಾಣ ಪತ್ರ ಕೊಡಬಹುದು. ಆದರೆ, ಯೋಗ್ಯತೆಯನ್ನು ನೀವೇ ಸಂಪಾದಿಸಬೇಕು. ಯಾರ ಸಹಾನುಭೂತಿ, ದಯೆಯಲ್ಲಿ ಬದುಕದೇ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಆತ್ಮಗೌರವದಿಂದ ಬದುಕಬೇಕು. ಸಣ್ಣ ಕನಸುಗಳನ್ನು ಕಾಣುವುದೇ ಅಪರಾಧ ಎಂದು ಹಿರಿಯರು ಹೇಳಿದ್ದಾರೆ. ಹೀಗಾಗಿ ಯುವಕರು ದೊಡ್ಡ ಕನಸುಗಳನ್ನು ಕಾಣಬೇಕು. ಸತತ ಪರಿಶ್ರಮವಹಿಸಬೇಕು. ಪರಿಶ್ರಮವಿದ್ದರೆ ಯಾವುದೇ ಕಾರ್ಯ ಇರಲಿ. ಅದರಲ್ಲಿ ಯಶಸ್ಸು ಖಂಡಿತವಾಗಿ ಲಭಿಸುತ್ತದೆ. ಜೀವನವೇ ಒಂದು ಹೋರಾಟ. ಇಲ್ಲಿ ಸಾಹಸ ಮಾಡಲೇಬೇಕು. ಶಕ್ತಿಯೇ ಜೀವನ. ದೌರ್ಬಲ್ಯವೇ ಮರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ನುಡಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ, ತುಮಕೂರು ವಿ.ವಿ ಸಂಯೋಜನಾಧಿಕಾರಿ ಡಾ.ಎಂ.ಕೊಟ್ರೇಶ್, ಹಡಗಲಿ ವೇದಿಕೆಯಲ್ಲಿದ್ದರು. ಹಿರಿಯ ಕ್ರೀಡಾ ತರಬೇತಿದಾರರಾದ ಇಸ್ಮಾಯಿಲ್ ನಿರೂಪಿಸಿದರು.

ನೂರು ಬಾರಿ ಸೋತರೂ ಗೆಲ್ಲುವ ಆತ್ಮವಿಶ್ವಾಸವಿರಲಿ
’33 ಕೋಟಿ ದೇವರುಗಳಲ್ಲಿ ನಂಬಿಕೆ ಇದ್ದರೂ ಮನುಷ್ಯನಿಗೆ ತನ್ನ ಮೇಲೆ ತನಗೆ ನಂಬಿಕೆ ಇಲ್ಲದೇ ಇದ್ದರೆ ಎಲ್ಲವೂ ವ್ಯರ್ಥ. ಹೀಗಾಗಿ, ನಮ್ಮ ಮೇಲೆ ನಾವು ವಿಶ್ವಾಸವಿಟ್ಟುಕೊಳ್ಳಬೇಕು’ ಎಂದು ಸ್ವಾಮಿ ವೀರೇಶಾನಂದ ಸರಸ್ವತಿ ತಿಳಿಸಿದರು.

’ಸಾಧನೆಯ ಮೆಟ್ಟಿಲು ಹತ್ತುವಾಗ ನೂರು ಬಾರಿ ಸೋತರು 101ನೇ ಬಾರಿ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಯುವಕರು ಮುನ್ನಡೆಯಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅದನ್ನು ಪರಿಪಾಲಿಸಬೇಕು’ ಎಂದು ಹೇಳಿದರು.

* * 

ನಾನು 3ನೇ ತರಗತಿಯಲ್ಲಿಯೇ 1ರಿಂದ 20ರವರೆಗಿನ ಮಗ್ಗಿಯನ್ನು ಉಲ್ಟಾ ಹೇಳುತ್ತಿದ್ದೆ. ಹೀಗೆ ಉಲ್ಟಾ ಮಗ್ಗಿ ಹೇಳಿ ಅಮ್ಮನಿಗೆ ಬರ್ತ್ ಡೇ ಗಿಫ್ಟ್ ಕೊಟ್ಟಿದೆ.
– ಸ್ವಾಮಿ ವೀರೇಶಾನಂದ ಸರಸ್ವತಿ, ಅಧ್ಯಕ್ಷರು, ರಾಮಕೃಷ್ಣ ಆಶ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.