ADVERTISEMENT

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 7:10 IST
Last Updated 6 ಫೆಬ್ರುವರಿ 2018, 7:10 IST
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಮಳಿಗೆಗಳನ್ನು ವೀಕ್ಷಿಸುವಾಗ ರಾಮಲಿಂಗಾರೆಡ್ಡಿ ಅವರಿಗೆ ಮಕ್ಕಳು ಮಾಹಿತಿ ನೀಡಿದರು
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಮಳಿಗೆಗಳನ್ನು ವೀಕ್ಷಿಸುವಾಗ ರಾಮಲಿಂಗಾರೆಡ್ಡಿ ಅವರಿಗೆ ಮಕ್ಕಳು ಮಾಹಿತಿ ನೀಡಿದರು   

ತುಮಕೂರು: ‘ರೈತರು ಬೆಳೆದ ಬೆಂಬಲ ಬೆಲೆ ಸಿಗದೇ ಅವರು ಕಂಗಾಲಾಗಿದ್ದಾರೆ. ಸರಿಯಾದ ನೀರಾವರಿ ಸೌಲಭ್ಯ ಇಲ್ಲದೇ ಇರುವುದರಿಂದ ಅವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೃಷಿಯನ್ನು ಲಾಭದಾಯವಾಗಿಸಿಕೊಳ್ಳಲು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು’ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿದರು. ಸಿದ್ದಗಾಂಗ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ನಡೆಯುವ ‘ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ’ಕ್ಕೆ  ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಅಭಾವ ಹೆಚ್ಚಿದೆ. ಆದ್ದರಿಂದ ತಾಂತ್ರಿಕತೆ ಅಳವಡಿಸಿಕೊಳ್ಳಲು ಅನಿವಾರ್ಯವಾಗಿದೆ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ದೂರದೃಷ್ಟಿ ಇಟ್ಟುಕೊಂಡು ಶಿವಕುಮಾರ ಸ್ವಾಮೀಜಿ ಅವರು ಆರಂಭಿಸಿದ್ದ ವಸ್ತುಪ್ರದರ್ಶನದ ಉಪಯೋಗವನ್ನು ರೈತರು ಪಡೆಯಬೇಕು ಎಂದರು.

ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ‘2030ರ ಒಳಗೆ ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸದಿದ್ದರೆ ಮರುಭೂಮಿಯಾಗುವ ಅಪಾಯವಿದೆ. ಮಳೆಯಾಶ್ರಿತ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂತರ್ಜಲ ಅಭಿವೃದ್ಧಿಗೆ ಶ್ರಮಿಸಬೇಕು' ಎಂದು ಸಲಹೆ ಮಾಡಿದರು.

ADVERTISEMENT

ರೈತ ಸಮುದಾಯಕ್ಕೆ ಅನುಕೂಲವಾಗುವ ಕೃಷಿ ಹಾಗೂ ಕೈಗಾರಿಕಾ ವಸ್ತುಪ್ರದರ್ಶನದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಅನುಕೂಲವಾಗುವ ಸಾಕಷ್ಟು ಯೋಜನಗಳನ್ನು ಸರ್ಕಾರ ಘೋಷಣೆ ಮಾಡಿದ್ದು ಈ ಕಾರ್ಯಕ್ರಮಗಳ ಪ್ರಚಾರವಾಗಬೇಕು ಎಂದರು.

ನಗರ ಶಾಸಕ ಡಾ.ರಫೀಕ್ ಎಸ್.ಅಹ್ಮದ್ ಮಾತನಾಡಿದರು. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಶಾಸಕ ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ನರಸಿಂಹಮೂರ್ತಿ ಇದ್ದರು.

ವಸ್ತುಪ್ರದರ್ಶನದಲ್ಲಿ 165 ಮಳಿಗೆಗಳು

ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದಲ್ಲಿ 165ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರದ 3, ರಾಜ್ಯ ಸರ್ಕಾರದ 14 ಇಲಾಖೆಗಳು, 147 ಖಾಸಗಿ ಹಾಗೂ ಇತರೆ ಮಳಿಗೆಗಳು ವಸ್ತು ಪ್ರದರ್ಶನದಲ್ಲಿವೆ.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕಾ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಅನೇಕ ಹತ್ತಾರು ಇಲಾಖೆಗಳು ತಮ್ಮ ಮಳಿಗೆಗಳನ್ನು ತೆರೆದಿರುವುದರಿಂದ ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಜನರಿಗೆ ಹೆಚ್ಚಿನ ಮಾಹಿತಿಗಳು ದೊರಕಲಿವೆ. ಉತ್ತಮ ಮಳಿಗೆಗಳಿಗೆ 3 ಪಾರಿತೋಷಕ, 12 ಪ್ರಥಮ ಬಹುಮಾನ, 12 ತೃತೀಯ, 11 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.