ADVERTISEMENT

ಜಾಕ್‌ವೆಲ್ ನಿರ್ಮಾಣಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 8:29 IST
Last Updated 10 ಫೆಬ್ರುವರಿ 2018, 8:29 IST
ಜಾಕ್‌ವೆಲ್ ನಿರ್ಮಾಣದ ಸ್ಥಳದಲ್ಲಿ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಜಾಕ್‌ವೆಲ್ ನಿರ್ಮಾಣದ ಸ್ಥಳದಲ್ಲಿ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಕುಣಿಗಲ್: ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲ ತಾಲ್ಲೂಕಿನ 128 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸುತ್ತಿರುವ ಜಾಕ್‌ವೆಲ್ ಕಾಮಗಾರಿಯನ್ನು ಕೋಡಿ ಪ್ರದೇಶದಲ್ಲಿ ನಿರ್ಮಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘದ
ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಸಂಘಟಿತರಾದ ಪದಾಧಿಕಾರಿಗಳು, ಜಲಾಶಯದ ಕೋಡಿ ಪ್ರದೇಶದಲ್ಲಿ ಜಾಕ್‌ವೆಲ್ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ತಡೆಯಲೆತ್ನಿಸಿದರು. ಪಟ್ಟು ಬಿಡದ ರೈತ ಸಂಘದವರು ಪೊಲೀಸರ ಸರ್ಪಗಾವಲು ಭೇದಿಸಿ ಜಾಕ್‌ವೆಲ್ ನಿರ್ಮಾಣದ ಸ್ಥಳಕ್ಕೆ ಬಂದು ಕಾಮಗಾರಿ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ತೆರವುಗೊಳಿಸಲು ಮುಂದಾದಾಗ ಸಿಪಿಐ ಬಾಳೇಗೌಡ ಸಿಬ್ಬಂದಿ ತಡೆದರು. ನಂತರ ಪ್ರತಿಭಟನಾ ಸಭೆ ನಡೆಸಿದರು.

ಆನಂದ್ ಪಟೇಲ್ ಮಾತನಾಡಿ, ‘ಮಾಗಡಿ ಶಾಸಕ ಬಾಲಕೃಷ್ಣ ಶ್ರೀರಂಗ ಏತ ನೀರಾವರಿ ಮೂಲಕ ಕುಣಿಗಲ್ ದೊಡ್ಡಕೆರೆಯಿಂದ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಸಂಚು ಮಾಡಿದ ಸರ್ಕಾರ ಈಗ ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಮಾರ್ಕೋನಹಳ್ಳಿ ಜಲಾಶಯದಿಂದ ನೀರು ಕೊಡಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ನಾಗಮಂಗಲ ತಾಲ್ಲೂಕಿಗೆ ಶ್ರವಣಬೆಳಗೊಳ ಮತ್ತು ನಾಗಮಂಗಲ ಶಾಖಾ ನಾಲೆಗಳಿಂದ 10 ಕಿ.ಮೀ ಅಂತರದಲ್ಲಿ ನೀರು ಹರಿಸುವ ಅವಕಾಶವಿದ್ದರೂ 25 ಕಿ.ಮೀ ದೂರದಿಂದ ನೀರು ತೆಗೆದುಕೊಂಡು ಹೋಗುವ ಹುನ್ನಾರ ತಾಲ್ಲೂಕಿನ ಎಡೆಯೂರು, ಅಮೃತೂರು ಮತ್ತು ಹುಲಿಯೂರುದುರ್ಗ ರೈತರ ಪಾಲಿಗೆ ಮರಣ ಶಾಸನವಾಗಿದೆ’ ಎಂದರು. ‘ಮುಂದಿನ ದಿನಗಳಲ್ಲಿ ಮೂರು ಹೋಬಳಿಯ ರೈತರು ಕೃಷಿ ಚಟುವಟಿಕೆಗೆ ತಿಲಾಂಜಲಿ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ’ ಎಂದರು.

‘ಸರ್ಕಾರಿ ಆದೇಶದಲ್ಲಿ ಜಲಾಶಯದ ಹಿನ್ನೀರಿನಲ್ಲಿ ಜಾಕ್‌ವೆಲ್ ನಿರ್ಮಾಣಕ್ಕೆ ಸೂಚನೆ ಇದ್ದರೂ, ಕೋಡಿ ಪ್ರದೇಶದಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡುತ್ತಿರುವುದನ್ನು ಸ್ಥಗಿತಗೊಳಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಹೇಮಾವತಿ ನಾಲಾ ಎಂಜಿನಿಯರ್ ರಾಮದಾಸ್ ಮಾತನಾಡಿ, ‘ನಾಗಮಂಗಲ ತಾಲ್ಲೂಕಿನ 128 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಒಂದು ಟಿಎಂಸಿ ನೀರು ಹರಿಸಲು ಸರ್ಕಾರ 6-6-12ರಲ್ಲಿ ಅನುಮೋದನೆ ನೀಡಿದೆ. ಆದರೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಯಾವುದೇ ಪತ್ರ ವ್ಯವಹಾರ ನಡೆಸದೆ, ಏಕಾಎಕಿ ಬಂದು ಕಾಮಗಾರಿ ಪ್ರಾರಂಭಿಸಿದ್ದಾರೆ’ ಎಂದು ತಿಳಿಸಿದರು.

ನಾಗಮಂಗಲ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಎಂಜಿನಿಯರ್ ಬೋರೆಗೌಡ ಮಾತನಾಡಿ, ಸರ್ಕಾರಿ ಸೂಚನೆ ಮೇರೆಗೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು. ಆನಂದ್ ಪಟೇಲ್ ಮಾತನಾಡಿ, ‘ಜಾಕ್‌ವೆಲ್ ನಿರ್ಮಾಣಕ್ಕೆ ಸೂಚನೆ ನೀಡಿದೆ. ಆದರೆ ಜಲಾಶಯದ ಹಸಿರು ವಲಯ ಎಂದು ಘೋಷಣೆಯಾಗಿರುವ ಕೆರೆಕೋಡಿ ಪ್ರದೇಶದಲ್ಲಿ ಯಾರ ಅನುಮತಿ ಪಡೆಯದೆ ಕಾಮಗಾರಿ ಮಾಡಿರುವುದು ಸರಿಯಲ್ಲ, ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹ ಪಡಿಸಿದರು ಕೊನೆಗೆ ಅಧಿಕಾರಿಗಳು ಕಾಮಗಾರಿ ಸ್ಥಗಿತಗೊಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕುಮಾರ್,ಅಮೃತೂರು ಹೋಬಳಿ ಘಟಕದ ಅಧ್ಯಕ್ಷ ಶಿವಕುಮಾರ್ ಪದಾಧಿಕಾರಿಗಳಾದ ಪ್ರಕಾಶ್, ಲಕ್ಷ್ಮಣಗೌಡ, ರಾಮಯ್ಯ, ಶ್ರೀನಿವಾಸ್, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.