ADVERTISEMENT

ನಿತ್ಯ 7.5 ಲಕ್ಷ ಲೀ. ಹಾಲು ಪೂರೈಕೆ

ತುಮುಲ್‌ ಆರ್ಥಿಕವಾಗಿ ಸದೃಢ: ಪ್ರತಿ ವಾರ ₹ 17 ಕೋಟಿ ಬಟಾವಡೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 5:56 IST
Last Updated 12 ಏಪ್ರಿಲ್ 2022, 5:56 IST
ಮಧುಗಿರಿ ಪಟ್ಟಣದ ತುಮುಲ್ ಉಪ ಕೇಂದ್ರ ಕಚೇರಿಯಲ್ಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಿದರು
ಮಧುಗಿರಿ ಪಟ್ಟಣದ ತುಮುಲ್ ಉಪ ಕೇಂದ್ರ ಕಚೇರಿಯಲ್ಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಿದರು   

ಮಧುಗಿರಿ: ‘ಒಕ್ಕೂಟಕ್ಕೆ ಈ ಹಿಂದೆ ಪ್ರತಿನಿತ್ಯ 8 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿತ್ತು. ಬೇಸಿಗೆ ಸಂದರ್ಭದಲ್ಲೂ ನಿತ್ಯ 7.5 ಲಕ್ಷ ಲೀಟರ್ ಹಾಲು ಹರಿದು ಬರುತ್ತಿದೆ’ ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಒಕ್ಕೂಟದ ಉಪ ಕೇಂದ್ರ ಕಚೇರಿಯಲ್ಲಿ ಸೋಮವಾರ 254 ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಿ ಅವರು ಮಾತನಾಡಿದರು.

ಈಗ ತುಮುಲ್ ಲಾಭದಾಯಕವಾಗಿದೆ. ಪ್ರತಿ ವಾರವೂ ರೈತರಿಗೆ ₹ 17 ಕೋಟಿ ಬಟಾವಡೆಯಾಗುತ್ತಿದೆ. ತುರ್ತು ಸಂದರ್ಭದ ಉದ್ದೇಶದಿಂದ ಒಕ್ಕೂಟವು ₹ 80 ಕೋಟಿಯನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದೆ ಎಂದು ತಿಳಿಸಿದರು.

ADVERTISEMENT

‘ಕಲುಷಿತ ಆಹಾರ ಸೇವನೆಯಿಂದ ಯುವಪೀಳಿಗೆಯು ಚಿಕ್ಕವಯಸ್ಸಿನಲ್ಲೇ ಅಧಿಕ ರಕ್ತದೊತ್ತಡ, ಮಧುಮೇಹದಂತಹ ಗಂಭೀರ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ದುರಂತ’ ಎಂದು ವಿಷಾದಿಸಿದರು.

ಈ ಹಿಂದೆ ಬಿ.ಪಿ ಮತ್ತು ಮಧುಮೇಹ ಶ್ರೀಮಂತರಿಗೆ ಮಾತ್ರ ಬರುವ ರೋಗಗಳೆಂಬ ಭಾವನೆಯಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಆಹಾರದ ಅಸಮತೋಲನ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಯುವಪೀಳಿಗೆ ಮತ್ತು ಹಳ್ಳಿಗಾಡಿನ ಬಡಜನತೆಯೂ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ವಿಷಾದಿಸಿದರು.

ರೋಗದ ಬಗೆಗಿನ ಅರಿವಿನ ಕೊರತೆಯಿಂದ ಯಾವುದೇ ಪರೀಕ್ಷೆಗೊಳಗಾಗದೆ ನಿರ್ಲಕ್ಷ್ಯ ತೋರುವುದರಿಂದ ಈ ರೋಗಗಳು ಹೆಚ್ಚಾಗುತ್ತಿವೆ. ಇದನ್ನು ಮನಗಂಡು ತುಮುಲ್‌ನಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರೋಗ್ಯದ ತೊಂದರೆ ಇರುವ ಬಹಳಷ್ಟು ಬಡಜನತೆ ಈ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಶಿಬಿರದಲ್ಲಿ ನೇತ್ರ ತಜ್ಞರಿಂದ ಪರೀಕ್ಷೆಗೊಳಪಟ್ಟ 50 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕನ್ನಡಕದ ಅವಶ್ಯಕತೆಯಿರುವ ಎಲ್ಲಾ ಬಡಜನತೆಗೂ ಉಚಿತವಾಗಿ ಕನ್ನಡಕ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲೂ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತುಮುಲ್ ವಿಸ್ತರಣಾಧಿಕಾರಿಗಳಾದ ಶಂಕರನಾಗ್, ಗಿರೀಶ್ ಹಾಗೂ ಹಾಲು ಉತ್ಪಾದಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.