ತುಮಕೂರು ತಾಲ್ಲೂಕಿನ ಕೆಸ್ತೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ– ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಎರಡೂ ಪಕ್ಷಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಶಾಸಕರಾದ ಬಿ.ಸುರೇಶ್‍ಗೌಡ, ಭೈರತಿ ಬಸವರಾಜು, ಮೊದಲಾದವರು ಪಾಲ್ಗೊಂಡಿದ್ದರು
ಕೋರ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಕೂಸಾದ ಕೈಗಾರಿಕಾ ಕಾರಿಡಾರ್ ಅನ್ನು ಜಿಲ್ಲೆಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾರಿಡಾರ್ ಅಭಿವೃದ್ಧಿಗೆ ₹7 ಸಾವಿರ ಕೋಟಿ ಅನುದಾನ ಬರಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹೋಬಳಿಯ ಕೆಸ್ತೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಮತಯಾಚಿಸಿ ಮಾತನಾಡಿದರು.
ತಿಪಟೂರು, ಚಿಕ್ಕನಾಯಕನಹಳ್ಳಿ ಭಾಗದ ಪ್ರತಿ ಮನೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಸೋಮಣ್ಣ ಅಭಿವೃದ್ಧಿ ಮಾಡುವ ವ್ಯಕ್ತಿ. ಪ್ರಧಾನಿ ಮೋದಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಆಶೀರ್ವಾದ ಪಡೆದು ಜಿಲ್ಲೆಗೆ ಬಂದಿದ್ದಾರೆ. ಅವರಿಗೆ ಮತ ನೀಡಿ, ನಿಮ್ಮ ಸೇವೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾಗ್ಯಲಕ್ಷ್ಮಿ, ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತರಲಾಗಿತ್ತು. ಹಾಲಿನ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಈಗಿನ ರಾಜ್ಯ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. ಜನರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ಮತ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಅಭ್ಯರ್ಥಿ ವಿ.ಸೋಮಣ್ಣ, ‘ಎಲ್ಲ ಕಡೆ ಮೋದಿ ಗಾಳಿ ಇದೆ. ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಅವರಿಗೆ ಶಕ್ತಿ ತುಂಬಲು ಚುನಾವಣೆಯಲ್ಲಿ ನನಗೆ ಮತ ಕೊಡಿ’ ಎಂದು ಕೇಳಿಕೊಂಡರು.
ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶ್‍ಗೌಡ, ಬಿ.ಜಿ.ಜ್ಯೋತಿಗಣೇಶ್, ಭೈರತಿ ಬಸವರಾಜು, ಮಾಜಿ ಶಾಸಕ ಸುಧಾಕರ್‌ಲಾಲ್, ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಬಿಜೆಪಿ ಮಧುಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ, ಮುಖಂಡ ಅನಿಲ್‍ಕುಮಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.