ತುಮಕೂರು: ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಮಾಡಲು 7 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಲು ಜಿಲ್ಲಾ ಆಡಳಿತ ಹಾಗೂ ಅರಣ್ಯ ಇಲಾಖೆ ಮುಂದಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿ ಗ್ರಾಮದ ಸರ್ವೆ ನಂ. 31ರ ವ್ಯಾಪ್ತಿಯಲ್ಲಿರುವ 47 ಎಕರೆ ಪ್ರದೇಶದಲ್ಲಿ ಬೆಳೆದಿರುವ 7,029 ಮರಗಳನ್ನು ಕತ್ತರಿಸಲಾಗುತ್ತಿದೆ. ಈಗಾಗಲೇ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ, ಪರಿಸರ, ಕಾಡು ನಾಶವಾಗುತ್ತಿದೆ ಎಂಬ ಆಕ್ಷೇಪಗಳ ನಡುವೆ ಬೆಳೆದು ನಿಂತ ಮರಗಳನ್ನು ಕಡಿಯುತ್ತಿರುವುದು ಅಸಮಾಧಾನವನ್ನು ಹೆಚ್ಚಿಸಿದೆ.
ಅಕೇಶಿಯಾ 1,034, ಉದಯ 394, ಕಗ್ಗಲಿ 604, ಕಮರ 385, ಕಾಡುಜಾತಿಯ 3,812, ತೇಗ 9, ದಿಂಡಗ 440, ಬಿಲ್ವಾರ 73, ಬೇವು 82, ಹೊಂಗೆ 98, ಅರಳಿ, ಆಲ ಸೇರಿದಂತೆ 47 ಎಕರೆಯಲ್ಲಿ ದಟ್ಟವಾಗಿ ಬೆಳೆದಿರುವ 7,029 ಮರಗಳನ್ನು ಕಡಿದು, ಅರಣ್ಯ ನಾಶಕ್ಕೆ ಜಿಲ್ಲಾ ಆಡಳಿತ ಮುಂದಾಗಿರುವುದು ಪರಿಸರವಾದಿಗಳ ಕೋಪಕ್ಕೆ ಕಾರಣವಾಗಿದೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗೋಮಾಳದಲ್ಲಿ ಬೆಳೆದಿದ್ದ ಮರಗಳನ್ನು ಕಡಿದು ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮರಗಳ ಹರಾಜಿಗೆ ಅರಣ್ಯ ಇಲಾಖೆ ಟೆಂಡರ್ ಕರೆದಿದ್ದು, ಅರಣ್ಯ ನಾಶಮಾಡಿ ವಿದ್ಯುತ್ ಯೋಜನೆ ಜಾರಿಗೊಳಿಸುವ ಅಗತ್ಯವೇನಿತ್ತು? ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.
ಅರಣ್ಯ ಪ್ರದೇಶದ ವ್ಯಾಪ್ತಿಗೆ ಗೋಮಾಳ ಬರುವುದಿಲ್ಲ ಎಂದು ಜಿಲ್ಲಾ ಆಡಳಿತ ಹಾಗೂ ಆಡಳಿತ ಪ್ರಭುಗಳು ವಾದಿಸಬಹುದು. ಆದರೆ ದಟ್ಟ ಅರಣ್ಯವಾಗಿ ರೂಪುಗೊಂಡಿದ್ದ ಪ್ರದೇಶವನ್ನು ಈಗ ಇರುವಂತೆಯೇ ಬಿಟ್ಟಿದ್ದರೆ ಪರಿಸರಕ್ಕೆ ಎಷ್ಟೊಂದು ಸಹಕಾರಿಯಾಗುತಿತ್ತು. ಈ ಜಾಗದ ಬದಲು ಬಯಲು ಪ್ರದೇಶ, ಬಂಜರು ಭೂಮಿ ಅಥವಾ ಇನ್ನಾವುದಾದರೂ ಭೂಮಿಯನ್ನು ಬಳಕೆ ಮಾಡಬಹುದಿತ್ತು. ಅದು ಬಿಟ್ಟು ಸಮೃದ್ಧವಾಗಿ ಬೆಳೆದಿದ್ದ ಮರಗಳನ್ನು ಕಡಿಯುವ ಅಗತ್ಯವೇನಿತ್ತು? ವಿದ್ಯುತ್ ಯೋಜನೆ ಜಾರಿ ಮಾಡಲು ಅರಣ್ಯ ನಾಶವೇ ಆಗಬೇಕಿತ್ತೇ ಎಂದು ಪರಿಸರವಾದಿಗಳು ಕೇಳುತ್ತಿದ್ದಾರೆ.
Highlights - null
ಜಾಲ ತಾಣದಲ್ಲಿ ಟೀಕಾ ಪ್ರಹಾರ
ಮರ ಕಡಿಯಲು ಮುಂದಾಗಿರುವುದಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಹಲವರು ಹಲವು ರೀತಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಆಯ್ದ ಹೇಳಿಕೆಗಳನ್ನು ನೀಡಲಾಗಿದೆ. 7 ಸಾವಿರ ಮರ ಕಡಿದು ಅಭಿವೃದ್ಧಿ ಮಾಡಬೇಕೆ?; ಪರಿಸರ ಹಾಳು ಮಾಡಿ ಅಭಿವೃದ್ಧಿ ಮಾಡುವುದಾದರೆ ಅದನ್ನು ಅಭಿವೃದ್ಧಿ ಎನ್ನಬೇಕೆ? ನಿಮಗೆ; ನಮಗೆ ಬೇಡವಾದ ಅಭಿವೃದ್ಧಿ ಅವರಿಗೆ ಬೇಕಿರುತ್ತೆ; ಲಾಭ ಮುಖ್ಯ ಪರಿಸರ ಯಾರಿಗೆ ಬೇಕಿದೆ?; ಕೇಳಿದರೆ ಕಳ್ಳರ ಸಂತೆಯಲ್ಲಿ ಕಳ್ಳನನ್ನು ಹುಡುಕಿಕೊಡಿ ಎಂಬಂತಾಗಿದೆ; ಪರಿಸರ ದಿನಾಚರಣೆಗೆ ಈಗಿನಿಂದಲೇ ತಯಾರಿ ನಡೆದಿದೆ ಈ ವರ್ಷ ಅಧಿಕಾರಿಗಳ ಪರಿಸರ ದಿನಾಚರಣೆ ಅದ್ದೂರಿಯಾಗಿ ನಡೆಯಲಿದೆ. 7 ಸಾವಿರ ಮರಗಳನ್ನು ಕಡಿಯುವ ಮುನ್ನ 2 ಲಕ್ಷ ಸಸಿಗಳನ್ನು ನೆಟ್ಟು ಅವು ಗಿಡಗಳಾಗಿ ಬೆಳೆಯುವವರೆಗೂ ಪೋಷಣೆ ಮಾಡಬೇಕು. ಅರಣ್ಯ ನಾಶ ಮಾಡಿ ಅಭಿವೃದ್ಧಿ ಮಾಡಿ ಎಂದು ಎಲ್ಲಾದರೂ ಹೇಳಿದೆಯೇ?; ಬಡವ ಒಂದು ಮರ ಕಡಿದರೆ ದಂಡ ಹಾಕುತ್ತಾರೆ ಇಷ್ಟೊಂದು ಮರಗಳ ಮಾರಣ ಹೋಮ ನಡೆಯುತ್ತಿದ್ದರೂ ಕೈ ಕಟ್ಟಿ ಕುಳಿತಿರುವುದು ಏಕೆ?
ಜಿಲ್ಲಾ ಆಡಳಿತ ನಿರ್ಧಾರ
ಇದರಲ್ಲಿ ಅರಣ್ಯ ಇಲಾಖೆಯ ಪಾತ್ರವಿಲ್ಲ. ಜಿಲ್ಲಾಧಿಕಾರಿ ಭೂಮಿ ಮಂಜೂರು ಮಾಡಿದ್ದು ವಿದ್ಯುತ್ ಘಟಕ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಜಿಲ್ಲಾ ಆಡಳಿತ ಹೇಳಿದಂತೆ ನಾವು ಕೆಲಸ ಮಾಡಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.