ADVERTISEMENT

ತುಮಕೂರು: 78 ಮಂದಿಗೆ ಪಿಎಚ್‌.ಡಿ, ಐವರಿಗೆ ಡಿ.ಲಿಟ್

ವಿ.ವಿ ಘಟಿಕೋತ್ಸವ ನಾಳೆ; 10,273 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 14:19 IST
Last Updated 5 ಆಗಸ್ಟ್ 2023, 14:19 IST
ತುಮಕೂರು ವಿಶ್ವವಿದ್ಯಾಲಯ
ತುಮಕೂರು ವಿಶ್ವವಿದ್ಯಾಲಯ   

ತುಮಕೂರು: ಈ ಬಾರಿ ತುಮಕೂರು ವಿಶ್ವವಿದ್ಯಾಲಯ 78 ಮಂದಿಗೆ ಪಿಎಚ್.ಡಿ, ಐವರಿಗೆ ಡಿ.ಲಿಟ್, 10,273 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದೆ. 99 ಚಿನ್ನದ ಪದಕಗಳನ್ನು 80 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

ಆಗಸ್ಟ್ 7ರಂದು ವಿ.ವಿಯಲ್ಲಿ ನಡೆಯುವ 16ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಧ್ಯಕ್ಷತೆ ವಹಿಸಲಿದ್ದು, ನವದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶಾಂತಿಶ್ರೀ ಧೂಳಿಪುಡಿ ಪಂಡಿತ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

ಚಿನ್ನದ ಪದಕ: ಸ್ನಾತಕೋತ್ತರ ಪದವಿ ಕನ್ನಡ ವಿಭಾಗದ ಡಿ.ಸಿ.ಕಾವ್ಯ ಅತಿ ಹೆಚ್ಚು 4 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಎಸ್.ಸಂಧ್ಯಾ (ಎಂಕಾಂ) 3 ಚಿನ್ನದ ಪದಕ, ದೀಪಿಕಾ ಡಿ.ಜೈನ್ 3 (ಬಿಕಾಂ), ಎಲ್.ಇ.ಆಶಾ 3 (ಎಂಎಸ್‌ಸಿ ಗಣಿತ), ಆರ್.ಟಿ.ರಮ್ಯಾ 3 (ಬಿಎ ಅರ್ಥಶಾಸ್ತ್ರ), ಹುಸ್ನಾಬೇಗಂ (ಎಂಎ ಅರ್ಥಶಾಸ್ತ್ರ), ಎ.ಆಕಾಶ್ (ಎಂಎ ರಾಜ್ಯಶಾಸ್ತ್ರ), ಜಿ.ಉಮೇಶ್ (ಎಂಎಸ್‌ಡಬ್ಲ್ಯು) ಜಿ.ಜೆ.ಮನೋಜ್ (ಬಿಎ ಕನ್ನಡ– ಐಶ್ಚಿಕ), ಟಿ.ಚೇತನ (ಎಂಎಸ್‌ಸಿ), ರಕ್ಷಿತಾ (ರಕ್ಷಿತಾ), ಎಸ್.ಪಿ.ರಾಣಿಶ್ರೀ (ಬಿಎಸ್‌ಸಿ) ತಲಾ 2 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ ಎಂದು ವಿವರಿಸಿದರು.

ADVERTISEMENT

ಬಾಲಕಿಯರೇ ಹೆಚ್ಚು: ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯುವಲ್ಲಿ ಬಾಲಕಿಯರೇ ಮುಂದಿದ್ದಾರೆ. ಪದವಿಯಲ್ಲಿ ಬಾಲಕಿಯರು 5,456, ಬಾಲಕರು 3,300 (ಒಟ್ಟು 8,756) ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಮಹಿಳೆಯರು 999, ಯುವಕರು 518 (ಒಟ್ಟು 1,517) ಮಂದಿ ಪದವಿ ಪಡೆದುಕೊಳ್ಳುತ್ತಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ ಸೇರಿ ಒಟ್ಟು 10,273 ಮಂದಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾಲೇಜು ಸಾಧನೆ: ವಿ.ವಿ ಕಲಾ ಕಾಲೇಜು ಒಟ್ಟು 8 ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಮೊದಲ ಸ್ಥಾನ ಕಾಯ್ದುಕೊಂಡಿದೆ. ವಿ.ವಿ ವಿಜ್ಞಾನ ಕಾಲೇಜು, ಶೇಷಾದ್ರಿಪುರಂ ಕಾಲೇಜು, ವಿದ್ಯಾವಾಹಿನಿ ಕಾಲೇಜು ತಲಾ 8, ಸಿದ್ಧಗಂಗಾ ಮಹಿಳಾ ಕಾಲೇಜು, ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಲಾ 6, ಸಿದ್ಧಗಂಗಾ ಕಾಲೇಜು 5 ರ್‍ಯಾಂಕ್ ಪಡೆದುಕೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ (ಆಡಳಿತ) ನಾಹಿದಾ ಜಮ್‌ಜಮ್, ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಫಲಿತಾಂಶ ಅಲ್ಪ ಹೆಚ್ಚಳ ತುಮಕೂರು

ಕಳೆದ ವರ್ಷ ತೀವ್ರವಾಗಿ ಕುಸಿತ ಕಂಡಿದ್ದ ಪದವಿ ಫಲಿತಾಂಶದಲ್ಲಿ ಈ ಬಾರಿ ಅತ್ಯಲ್ಪ ಸುಧಾರಣೆಯಷ್ಟೇ ಕಂಡಿದ್ದು ಶೇ 49.83ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ಹಿಂದಿನ ವರ್ಷ ಕಲೆ ವಾಣಿಜ್ಯ ವಿಜ್ಞಾನ ಪದವಿಯಲ್ಲಿ ಶೇ 47.21ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಈ ಸಲ ಶೇ 2.62ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ವಿವರ: ಆವರಣದಲ್ಲಿ ಹಿಂದಿನ ವರ್ಷದ ಫಲಿತಾಂಶ ನೀಡಲಾಗಿದೆ. ಬಿಎ ಶೇ 44.11 (ಶೇ 42.82) ಬಿಎಸ್‌ಡಬ್ಲ್ಯು ಶೇ 57.98 (ಶೇ 48.11) ಬಿಕಾಂ ಶೇ 46.47 (ಶೇ 45.52) ಬಿಬಿಎಂ ಶೇ 58.10 (ಶೇ 56.93) ಬಿಎಸ್‌ಸಿ ಶೇ 43.43 (ಶೇ 39.35) ಬಿಸಿಎ ಶೇ 65.16 (ಶೇ 62.65) ತೇರ್ಗಡೆಯಾಗಿದ್ದಾರೆ.

ಎಲ್‌ಎಲ್‌ಎಂ ಸಂಜೆ ಕಾಲೇಜು

ಸ್ನಾತಕೋತ್ತರ ಕಾನೂನು ಪದವಿ (ಎಲ್‌ಎಲ್‌ಎಂ) ಸಂಜೆ ಕಾಲೇಜು ಸೇರಿದಂತೆ ಐದು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು. ಹೊಸ ಕ್ಯಾಂಪಸ್‌ನಲ್ಲಿ ಕಟ್ಟಡಗಳ ನಿರ್ಮಾಣ ಕೆಲಸ ನಡೆಯುತ್ತಿದ್ದು ಈಗಾಗಲೇ ಕಲಾ ಭವನ ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರದ ಕೆಲಸ ಪೂರ್ಣಗೊಂಡಿದೆ. ಡಿಸೆಂಬರ್ ಅಂತ್ಯದ ಒಳಗೆ 12 ವಿಭಾಗಗಳನ್ನು ಸ್ಥಳಾಂತರಿಸಲಾಗುವುದು. ಬಿಸಿಎ ಕೋರ್ಸ್‌ಗೆ ಹೆಚ್ಚು ಬೇಡಿಕೆ ಇದ್ದು ಮುಂದಿನ ವರ್ಷ ಪ್ರವೇಶ ಸಂಖ್ಯೆಯನ್ನು 250–300ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.