ADVERTISEMENT

ತಿಪಟೂರು: ಖಾಸಗಿ ಶಾಲೆಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ

ನೊಣವಿನಕೆರೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ 614 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 7:38 IST
Last Updated 29 ನವೆಂಬರ್ 2021, 7:38 IST
ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ
ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ   

ತಿಪಟೂರು: ಹಲವು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ನಿರಂತರ ಏರಿಕೆ ಕಂಡಿರುವ ತಾಲ್ಲೂಕಿನ ಶತಮಾನದ ಶಾಲೆ, ಗುಣಮಟ್ಟದ ಶಿಕ್ಷಣ ನೀಡುತ್ತಾ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ.

ತಾಲ್ಲೂಕಿನ ನೊಣವಿನಕೆರೆಯಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಏಳನೇ ತರಗತಿವರೆಗೆ 614 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

2011-12ನೇ ಶೈಕ್ಷಣಿಕ ಸಾಲಿನಲ್ಲಿ ಕೇವಲ 188 ಇದ್ದ ವಿದ್ಯಾರ್ಥಿಗಳ ಸಂಖ್ಯೆ 2021-22ನೇ ಸಾಲಿಗೆ 614ಕ್ಕೆ ತಲುಪಿದೆ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿರುವ ಶಿಕ್ಷಕ ವೃಂದದ ಪರಿಶ್ರಮಕ್ಕೆ ಸುತ್ತಲಿನ ಗ್ರಾಮಗಳ ಜನರು ಸಹಕಾರ ನೀಡಿದ್ದಾರೆ. ಇಂಗ್ಲಿಷ್‌ ಮಾಧ್ಯಮ, ಕಂಪ್ಯೂಟರ್ ಶಿಕ್ಷಣ, ಕ್ರೀಡೆ, ಉತ್ತಮ ಗ್ರಂಥಾಲಯ ಸೌಲಭ್ಯ ನೀಡಿದ್ದು, ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲಿಯೂ ಸಕ್ರಿಯರಾಗಿದ್ದಾರೆ.

ADVERTISEMENT

ನೊಣವಿನಕೆರೆ ಹೋಬಳಿಯಲ್ಲಿ 1895ರಲ್ಲಿ ಈ ಶಾಲೆ ಆರಂಭವಾಯಿತು. 1963ರಲ್ಲಿ ಸರ್ಕಾರಿ ಮಾದರಿ ಬಾಲಕರ ಶಾಲೆಯಾಗಿ ರೂಪುಗೊಂಡಿತು. 1994ರಲ್ಲಿ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ
ಶಾಲೆಯಾಯಿತು.

ಶಾಲೆಯಲ್ಲಿ ಸದ್ಯ ಗಣನೀಯ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಶಾಲೆಗೆ ಇನ್ನೂ ಉತ್ತಮ ಕಟ್ಟಡದ ಅಗತ್ಯವಿದೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಪೋಷಕರು, ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.

‘ಖಾಸಗಿ ಶಾಲೆಯಿಂದ ಮೊದಲು ಇಲ್ಲಿಗೆ ಬಂದು ಸೇರಿದೆ. ಈ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಹಡಿಯಲಿಲ್ಲ. ಹಿಂದಿನ ಶಾಲೆಗಿಂತ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ, ಸ್ಪರ್ಧಾತ್ಮಕ ಚಟುವಟಿಕೆಗಳಿಗೂ ಅವಕಾಶ ದೊರೆತಿರುವುದು ಖುಷಿ ನೀಡಿದೆ’ ಎಂದು 7ನೇ ತರಗತಿ ವಿದ್ಯಾರ್ಥಿನಿ ಮಾನ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.