ADVERTISEMENT

ತುಮಕೂರು: ಪೌಷ್ಟಿಕ ಪುನಶ್ಚೇತನ ಕೇಂದ್ರದಲ್ಲಿ ಮಕ್ಕಳೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 4:49 IST
Last Updated 23 ನವೆಂಬರ್ 2023, 4:49 IST
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರ
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರ   

ತುಮಕೂರು: ಅಪೌಷ್ಟಿಕತೆಯಿಂದ ಬಳಲುತ್ತಿರುವ, ಕಡಿಮೆ ತೂಕ ಇರುವ ಮಕ್ಕಳ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರಂಭಿಸಿರುವ ಪೌಷ್ಟಿಕ ಪುನಶ್ಚೇತನ ಕೇಂದ್ರದಲ್ಲಿ ಮಕ್ಕಳೇ ಇಲ್ಲ!

ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ನಡೆಯುತ್ತಿದ್ದ ಪೌಷ್ಟಿಕ ಪುನಶ್ಚೇತನ ಕೇಂದ್ರವನ್ನು ಇತ್ತೀಚೆಗೆ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಪ್ರತ್ಯೇಕ ಕಟ್ಟಡ ನಿರ್ಮಾಣ ಕಾಮಗಾರಿಯೂ ಕುಂಟುತ್ತಾ ಸಾಗಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಪ್ರಸ್ತುತ ಎಲ್ಲ ಕೆಲಸಗಳು ಮುಗಿದಿದ್ದು, ಇದೀಗ ಹೊಸ ಕಟ್ಟಡಕ್ಕೆ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ.

ಹೆರಿಗೆಯಾದ ನಂತರ ಮಕ್ಕಳ ವಿಭಾಗದಿಂದ ಕೇಂದ್ರಕ್ಕೆ ಮಕ್ಕಳನ್ನು ಸೇರಿಸಲಾಗುತ್ತಿದೆ. ಅಂಗನವಾಡಿಗಳಿಂದಲೂ ಮಕ್ಕಳನ್ನು ಕಳುಹಿಸಲಾಗುತ್ತದೆ. ಈ ಕೇಂದ್ರದಲ್ಲಿ 14 ದಿನಗಳ ಕಾಲ ಮಕ್ಕಳ ಆರೈಕೆ ಮಾಡಲಾಗುತ್ತದೆ. ಕೇಂದ್ರದಿಂದ ಮನೆಗೆ ಹೋದ ನಂತರ ಮಕ್ಕಳಿಗೆ ನೀಡಬೇಕಾದ ಆಹಾರದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ. ಮಾಹಿತಿ ಕೊರತೆಯಿಂದಾಗಿ ಕೇಂದ್ರದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಪ್ರಸ್ತುತ ಕೇವಲ ಒಂದು ಮಗು ಮಾತ್ರ ಕೇಂದ್ರಕ್ಕೆ ದಾಖಲಾಗಿದೆ.

ADVERTISEMENT

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ನಿಧಿಯಿಂದ ₹50 ಲಕ್ಷ ವೆಚ್ಚದಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಕೇಂದ್ರದಲ್ಲಿ 10 ಹಾಸಿಗೆಗಳಿವೆ. 6 ತಿಂಗಳಿನಿಂದ 5 ವರ್ಷದ ಒಳಗಿನ ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮ ವಹಿಸಲಾಗುತ್ತಿದೆ. ಇಲ್ಲಿ 2 ಮಕ್ಕಳ ತಜ್ಞರು, ಒಬ್ಬರು ಗ್ರೂಪ್‌ ಡಿ, ಅಡುಗೆಯವರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಕೇಂದ್ರದ ನೂತನ ಕಟ್ಟಡದಲ್ಲಿ ಪ್ರತ್ಯೇಕವಾದ ಅಡುಗೆ ಕೋಣೆ, ಶೌಚಾಲಯ ಇತರೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಅಡುಗೆ ಮಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಿಸಲಾಗುತ್ತಿದೆ. ಅವರ ಆಟೋಟಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೇಂದ್ರದ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಿದ್ದು, ಮಕ್ಕಳನ್ನು ಆಕರ್ಷಿಸುತ್ತಿವೆ. ಆಸ್ಪತ್ರೆಯ ಬದಲಾಗಿ ಅಂಗನವಾಡಿಯಂತೆ ಭಾಸವಾಗುತ್ತದೆ.

ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಹೆರಿಗೆಯಾದ ನಂತರ ಶಿಶುಗಳ ಸಾವಿನ ಪ್ರಮಾಣವೂ ಅಧಿಕ ಸಂಖ್ಯೆಯಲ್ಲಿದೆ. ಜನನದ ನಂತರ ತೂಕ ಕಡಿಮೆ ಇರುವುದರಿಂದ ಹೆಚ್ಚಿನ ಶಿಶುಗಳು ಸಾವನ್ನಪ್ಪುತ್ತಿವೆ. ಮಕ್ಕಳ ಆರೈಕೆಗೆ ಪ್ರತ್ಯೇಕವಾದ ಕೇಂದ್ರ ಆರಂಭಿಸಿರುವುದರಿಂದ ಮಕ್ಕಳ ಸಾವಿನ ಪ್ರಮಾಣ ಇಳಿಕೆಯಾಗಬಹುದು ಎಂದು ಮಕ್ಕಳ ತಜ್ಞರೊಬ್ಬರು ಮಾಹಿತಿ ಹಂಚಿಕೊಂಡರು.

ಮಕ್ಕಳ ಪೌಷ್ಟಿಕ ಪುನಶ್ಚೇತನ ಕೇಂದ್ರದ ಒಳನೋಟ

ಮಕ್ಕಳ ಆರೋಗ್ಯಕ್ಕೆ ಒತ್ತು

5 ವರ್ಷದ ಒಳಗಿನ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದಿಂದ ಪ್ರತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲೆಯ ಜನರಿಗೆ ಇದರಿಂದ ತುಂಬಾ ಉಪಯೋಗವಾಗಲಿದೆ. ಕೇಂದ್ರದಲ್ಲಿಯೇ ಗುಣಮಟ್ಟದ ಆಹಾರ ನೀಡುವುದರಿಂದ ಮಕ್ಕಳ ಆರೋಗ್ಯ ಸುಧಾರಿಸಲಿದೆ. ಡಾ.ವೀಣಾ ಜಿಲ್ಲಾ ಶಸ್ತ್ರಚಿಕಿತ್ಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.