ಗುಬ್ಬಿ: ಬಹುಪಯೋಗಿ ಹಾಗೂ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುವ ಹಲಸಿನ ಹಣ್ಣುಗಳಿಗೆ ಗುಬ್ಬಿ ತಾಲ್ಲೂಕಿನ ಚೇಳೂರು ಹಲಸಿನ ಮಾರುಕಟ್ಟೆ ಪ್ರಸಿದ್ಧಿಯಾಗಿದೆ.
ಚೇಳೂರಿನಲ್ಲಿ ಪ್ರತಿವರ್ಷದ ಏಪ್ರಿಲ್ ತಿಂಗಳಿನಿಂದ ಜುಲೈ ತಿಂಗಳವರೆಗೆ ವ್ಯಾಪಾರ ನಡೆಯುತ್ತದೆ. ಪ್ರತಿ ಗುರುವಾರ ನಡೆಯುವ ಹಲಸಿನ ಮಾರುಕಟ್ಟೆಗೆ ಜಿಲ್ಲೆಯ ಎಲ್ಲಾ ಭಾಗಗಳಿಂದಲೂ ಹಲಸಿನ ಹಣ್ಣು ತಂದು ಮಾರುತ್ತಾರೆ.
ನೀರಾವರಿ ಕಡಿಮೆ ಇರುವ ಬಯಲು ಪ್ರದೇಶಗಳಲ್ಲಿ ಹಲಸು ಬೆಳೆಯುವುದರಿಂದ ಈ ಭಾಗದ ಹಣ್ಣು ರುಚಿಕರವಾಗಿರುತ್ತದೆ ಎಂಬ ಕಾರಣಕ್ಕೆ ದೇಶದ ಅನೇಕ ರಾಜ್ಯಗಳ ವರ್ತಕರು ಚೇಳೂರು ಹಲಸಿನ ಮಾರುಕಟ್ಟೆಗೆ ಬಂದು ವ್ಯಾಪಾರ ಮಾಡುತ್ತಾರೆ.
ಈ ಮೊದಲು ಕೇವಲ ಪೂನಾ ಕಡೆಯ ವ್ಯಾಪಾರಿಗಳು ಮಾತ್ರ ಬರುತ್ತಿದ್ದರು. ಇತ್ತೀಚೆಗೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ದೆಹಲಿ, ಗುಜರಾತ್ ಕಡೆಗಳಿಂದಲೂ ವ್ಯಾಪಾರಿಗಳು ಬರುತ್ತಿರುವುದರಿಂದ ಮಾರುಕಟ್ಟೆ ಹೆಚ್ಚು ವಿಸ್ತೀರ್ಣವಾಗಿದೆ.
ಹಳದಿ, ಕೆಂಪು ಹಾಗೂ ಬಿಳಿ ಬಣ್ಣದ ಹಲಸಿನ ಹಣ್ಣುಗಳು ಚೇಳೂರು ಮಾರುಕಟ್ಟೆಗೆ ಬಂದರೂ, ಕೆಂಪು ತೊಳೆಯ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಉತ್ಕೃಷ್ಟವಾದ ರುಚಿಯಿಂದಾಗಿಯೇ ಈ ಭಾಗದ ಹಲಸಿನ ಹಣ್ಣುಗಳು ಹೆಚ್ಚು ವ್ಯಾಪಾರಿಗಳನ್ನು ಆಕರ್ಷಿಸಲು ಸಾಧ್ಯವಾಗಿದೆ.
ಹಲಸಿನ ಗಿಡಗಳನ್ನು ಶೂನ್ಯ ಬಂಡವಾಳದಲ್ಲಿ ಬೆಳೆದು ಉತ್ತಮ ಆದಾಯ ಪಡೆಯಲು ಸಾಧ್ಯವಿದ್ದರೂ ಅಧಿಕಾರಿಗಳು ಈ ಭಾಗದ ರೈತರಿಗೆ ಅರಿವು ಮೂಡಿಸಲು ಮುಂದಾಗುತ್ತಿಲ್ಲ ಎಂದು ರೈತರು ದೂರುತ್ತಾರೆ.
ನೇರ ಮಾರುಕಟ್ಟೆಯ ಅರಿವು ಇಲ್ಲದೆ ಇರುವುದರಿಂದ ಸುತ್ತಮುತ್ತಲಿನ ರೈತರು ಚೇಳೂರು ಮಾರುಕಟ್ಟೆಯಲ್ಲಿ ತಂದು ಎಣಿಕೆ ಲೆಕ್ಕದಲ್ಲಿ ಇಲ್ಲವೇ ಗುಡ್ಡೆ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಕೆಲವರು ಮರಗಳನ್ನೇ ಸ್ಥಳೀಯ ವ್ಯಾಪಾರಿಗಳಿಗೆ ಇಲ್ಲವೇ ದಲ್ಲಾಳಿಗಳಿಗೆ ವಾರ್ಷಿಕ ಬೆಳೆಯನ್ನೇ ಒಟ್ಟಿಗೆ ಇಂತಿಷ್ಟು ಬೆಲೆಗೆ ಎಂದು ಮಾರಾಟ ಮಾಡುತ್ತಾರೆ. ಅದನ್ನು ಪಡೆದ ಸ್ಥಳೀಯ ವರ್ತಕರು ಮಾರುಕಟ್ಟೆಗೆ ತಂದು ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಾರೆ.
ಅನೇಕರು ಹಲಸಿನ ಹಣ್ಣಿನ ವ್ಯಾಪಾರದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ರೈತರಿಗಿಂತ ಹೆಚ್ಚಾಗಿ ಸ್ಥಳೀಯ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಸಂಬಂಧಿಸಿದ ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಿ ನೇರ ಮಾರುಕಟ್ಟೆಯ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ ಎನ್ನುತ್ತಾರೆ ರೈತ ಸಂಘದ ಮಂಜುನಾಥ್.
ಚೇಳೂರು ಭಾಗದ ಸಿದ್ದು ಹಲಸು ಹೆಚ್ಚು ಪ್ರಸಿದ್ಧಿ ಪಡೆದಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಬಗ್ಗೆ ಹಲವು ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ. ಆದರೂ ಸ್ಥಳೀಯವಾಗಿ ಲಭ್ಯವಿರುವ ಇತರೆ ಹಣ್ಣುಗಳ ವ್ಯಾಪಾರ ನಡೆಯುತ್ತಿದೆ. ವ್ಯಾಪಾರಕ್ಕಾಗಿ ಬರುವವರಿಗೆ ವ್ಯಾಪಾರಿಗಳಿಗೆ ಸ್ಥಳೀಯವಾಗಿ ಯಾವುದೇ ಸೌಲಭ್ಯ ಲಭ್ಯವಾಗದೆ ಇರುವುದರಿಂದ ಅನೇಕ ವೇಳೆ ಸಂಕಷ್ಟಕ್ಕೆ ಸಿಲುಕುವಂತಾಗುತ್ತಿದೆ.
ಸುಂಕ ವಸೂಲಿಗೆ ಹರಾಜು ಪಡೆದಿರುವವರು ರೈತರಿಂದ ಹಾಗೂ ವ್ಯಾಪಾರಿಗಳಿಂದ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸುತ್ತಾರೆ. ಇದು ಹೊರ ರಾಜ್ಯದ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಿ ಇಲ್ಲಿಗೆ ಬರಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಹೆಚ್ಚು ಸುಂಕ ವಸೂಲಿ ಮಾಡದಂತೆ ನೋಡಿಕೊಳ್ಳಬೇಕು ಎಂದು ರೈತರು ಹೇಳುತ್ತಾರೆ.
ಕೊಯ್ಲು ಜಾಗೃತಿ ಮೂಡಿಸಲಿ
ರೈತರು ಹಣ್ಣುಗಳನ್ನು ವ್ಯವಸ್ಥಿತವಾಗಿ ಕೊಯ್ಲು ಮಾಡದೇ ಹಣ್ಣು ಹಾಳಾಗಿ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ. ಹಣ್ಣು ಕೊಯ್ಲಿನ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದಲ್ಲಿ ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯ. ಇದರಿಂದ ರೈತರಿಗೂ, ವ್ಯಾಪಾರಿಗಳಿಗೂ ಅನುಕೂಲ.
- ಮಂಜುನಾಥ್, ಹಲಸಿನ ಹಣ್ಣಿನ ವ್ಯಾಪಾರಿ
ಅಧಿಕಾರಿಗಳು ಕ್ರಮಕೈಗೊಳ್ಳಬೇಕು
ಹಲಸಿನ ಬೆಳೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಹೆಚ್ಚು ಪ್ರದೇಶದಲ್ಲಿ ಬೆಳೆಯಲು ಪ್ರೋತ್ಸಾಹಿಸುವತ್ತ ಸಂಬಂಧಿಸಿದ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಾವು ರೈತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ.
- ಪರಮೇಶ್, ಸಿದ್ದು ಹಲಸಿನ ಮಾಲೀಕ
ಹಲಸಿನ ಮೇಳ ಏರ್ಪಡಿಸಿ
ಶೂನ್ಯ ಬಂಡವಾಳದಲ್ಲಿ ಹಲಸನ್ನು ಬೆಳೆಯಲು ಸಾಧ್ಯವಿರುವುದರಿಂದ ರೈತರಿಗೆ ಆರ್ಥಿಕವಾಗಿ ಲಾಭವಾಗುವುತ್ತದೆ. ಸ್ಥಳೀಯವಾಗಿ ಹಲಸಿನ ಮೇಳ ಏರ್ಪಡಿಸಿ ಹಲಸಿನ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಹೆಚ್ಚು ಪ್ರಯೋಜನ. ದಶಕಗಳ ಹಿಂದೆ ಹಲಸಿನ ಮೇಳ ನಡೆದದ್ದು ಬಿಟ್ಟರೆ, ಇತ್ತೀಚಿನ ವರ್ಷಗಳಲ್ಲಿ ಯಾವುದೇ ಮೇಳ ಆಯೋಜಿಸಿಲ್ಲ.
- ನಾಗರಾಜು, ರೈತ
ಅಡಿಕೆ ಬೆಳೆಯಲು ಅಸಕ್ತಿ
ಯಾವುದೇ ಬಂಡವಾಳವಿಲ್ಲದೆ ಹಲಸಿನಿಂದ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ಹಲಸು ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲು ಹೆಚ್ಚಿನ ಅಸಕ್ತಿ ವಹಿಸುತ್ತಿದ್ದಾರೆ. ಇದರಿಂದ ಹಲಸಿನ ಮರಗಳು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಕಂಡು ಬರುತ್ತಿದೆ.
- ಕೆಂಪರಾಜು, ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.