ADVERTISEMENT

ಕುಣಿಗಲ್‌- ರಾಗಿ ಬೆಳೆಯತ್ತ ರೈತರ ಚಿತ್ತ; ಶೇ 60ರಷ್ಟು ಬಿತ್ತನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 0:59 IST
Last Updated 5 ಆಗಸ್ಟ್ 2021, 0:59 IST
ಕುಣಿಗಲ್ ತಾಲ್ಲೂಕು ಪುಟ್ಟಯ್ಯನಪಾಳ್ಯದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತ ಪ್ರಗತಿಪರ ರೈತ ಮಹಿಳೆ ಚಂದ್ರಿಕಾ
ಕುಣಿಗಲ್ ತಾಲ್ಲೂಕು ಪುಟ್ಟಯ್ಯನಪಾಳ್ಯದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತ ಪ್ರಗತಿಪರ ರೈತ ಮಹಿಳೆ ಚಂದ್ರಿಕಾ   

ಕುಣಿಗಲ್: ತಾಲ್ಲೂಕಿನಲ್ಲಿ ಮೇ 15ರಿಂದ ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿತ್ತು. ಆಗಸ್ಟ್ 3ರ ವೇಳೆಗೆ ಶೇ 60ರಷ್ಟು ಬಿತ್ತನೆ ಪೂರ್ಣಗೊಂಡಿದೆ.

ಮಳೆ ಮುಂದುವರೆದರೆ ಸೆಪ್ಟೆಂಬರ್ ಅಂತ್ಯಕ್ಕೆ ಶೇ 100ರಷ್ಟು ಬಿತ್ತನೆ ಪೂರ್ಣಗೊಳ್ಳವ ವಿಶ್ವಾಸ ರೈತರಲ್ಲಿ ಮತ್ತು ಅಧಿಕಾರಿಗಳಲ್ಲಿ ಮೂಡಿದೆ.

ತಾಲ್ಲೂಕಿನಲ್ಲಿ ಜುಲೈನಲ್ಲಿ ವಾಡಿಕೆ ಮಳೆ 93 ಮಿ.ಮೀ ಆಗಬೇಕಿತ್ತು. ಕಳೆದ ವರ್ಷ 103 ಮಿ.ಮೀ ಮಳೆಯಾಗಿತ್ತು. ಈ ಬಾರಿ ಕೇವಲ 69 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಆಗಸ್ಟ್ 3ರವರೆಗೆ ಬಿದ್ದಿರುವ ಮಳೆಯನ್ನು ಗಮನಿಸಿದರೆ, ತಾಲ್ಲೂಕಿನಲ್ಲಿ ವಾಡಿಕೆ ಮಳೆ 354 ಮಿ.ಮೀ ಆಗಬೇಕಿದ್ದು, 448 ಮಿ.ಮೀ. ಮಳೆ ಬಿದ್ದಿದೆ. ಹುಲಿಯೂರುದುರ್ಗದಲ್ಲಿ ಹೆಚ್ಚು ಮಳೆಯಾಗಿದೆ.

ADVERTISEMENT

ತಾಲ್ಲೂಕಿನಲ್ಲಿ ಭತ್ತ, ರಾಗಿ ನಂತರ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಆದರೆ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿರುವುದರಿಂದ ರಾಗಿ ಬೆಳೆಯಲು ಒಲವು ತೋರಿದ್ದಾರೆ. ಮಾರ್ಕೋನಹಳ್ಳಿ, ಮಂಗಳಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಲಭ್ಯತೆ, ಉಳಿತಾಯ, ಅಂತರ್ಜಲ ಸ್ಥಿರತೆಗಾಗಿ ಅಧಿಕಾರಿಗಳ ಮನವಿ ಮತ್ತು ಸೂಚನೆ ಮೇರೆಗೆ ಅನೇಕರು ಭತ್ತವನ್ನು ಬದಿಗಿಟ್ಟು ರಾಗಿಯತ್ತ ಚಿತ್ತ ನೆಟ್ಟಿದ್ದಾರೆ. ಆದರೂ ಸಾಂಪ್ರದಾಯಿಕವಾಗಿ ಭತ್ತ ಬೆಳೆಯುತ್ತಿದ್ದವರು ಅದನ್ನೇ ಮುಂದುವರೆಸಿದ್ದಾರೆ.

ಮಾರ್ಕೋನಹಳ್ಳಿ ಜಲಾಶಯದಲ್ಲಿ 85 ಅಡಿ ನೀರಿದೆ. ಹೇಮಾವತಿ ನೀರಿನ ಕೊರತೆಯಾದರೆ ಭತ್ತಕ್ಕೆ ನೀರು ಸಾಲುವುದಿಲ್ಲ ಎಂಬ ಅಭಿಪ್ರಾಯ ನಾಲಾವಲಯದ ಅಧಿಕಾರಿಗಳದ್ದು.

ತಾಲ್ಲೂಕಿನಲ್ಲಿ ಕಳೆದ ವರ್ಷ 10,800 ರೈತರಿಂದ 2.25 ಲಕ್ಷ ಕ್ವಿಂಟಲ್ ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಿದ್ದು,
ಈ ಬಾರಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.