ADVERTISEMENT

ಕುಣಿಗಲ್ | ಲಸಿಕೆ ನಂತರ ಮಗು ಸಾವು ಆರೋಪ: ಪೋಷಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 5:05 IST
Last Updated 4 ಜನವರಿ 2025, 5:05 IST

ಕುಣಿಗಲ್: ತಾಲ್ಲೂಕಿನ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಲಸಿಕೆ ಪಡೆದ ನಂತರ ಎರಡೂವರೆ ತಿಂಗಳ ಗಂಡು ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಶುಕ್ರವಾರ ಬೆಳಗ್ಗಿನ ಜಾವ ಮೃತಪಟ್ಟಿದೆ ಎಂದು ಪೋಷಕರು ದೂರಿದ್ದಾರೆ.

ತಾಲ್ಲೂಕಿನ ಕೊತ್ತಗೆರೆ ಹೋಬಳಿ ಸಿಂಗೋನಹಳ್ಳಿ ಗ್ರಾಮದ ಮುರಳಿ ಮೋಹನ್– ಚೈತ್ರ ದಂಪತಿ ಪುತ್ರ ದಕ್ಷಿತ್‌ಗೆ ಗುರುವಾರ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡೂವರೆ ತಿಂಗಳ ಲಸಿಕೆ ಹಾಕಿಸಿದ ನಂತರ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಶುಕ್ರವಾರ ಬೆಳಿಗ್ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತರುವ ಸಮಯದಲ್ಲಿ ಮೃತಪಟ್ಟಿದೆ.

ಮಗುವಿನ ಸಾವಿಗೆ ಲಸಿಕೆಯೇ ಕಾರಣ ಎಂದು ಆರೋಪಿಸಿದ ಪೋಷಕರು ಮತ್ತು ಸಂಬಂಧಿಕರು ಭಕ್ತರಹಳ್ಳಿ ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆಗೆ ಮುಂದಾದರು. ಸಿಬ್ಬಂದಿ ಪರಾರಿಯಾಗಿದ್ದಾರೆ. ಸಿಪಿಐ ‌ನವೀನ್ ಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು.

ADVERTISEMENT

ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗಿದ್ದು, ತಾಲ್ಲೂಕು ಆರೋಗ್ಯಾಧಿಕಾರಿ ಮರಿಯಪ್ಪ,‘ಶವ ಪರೀಕ್ಷೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಮಗುವಿನ ತಂದೆ ಮುರಳಿ ಮೋಹನ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೋಲಿಸರು‌ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.