ADVERTISEMENT

ಕೊಡಿಗೇನಹಳ್ಳಿ ಭಾಗದಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 5:30 IST
Last Updated 9 ಆಗಸ್ಟ್ 2025, 5:30 IST
ಕೊಡಿಗೇನಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಮೆಕ್ಕೆಜೋಳ ಬಿತ್ತನೆಯಲ್ಲಿ ತೊಡಗಿದ್ದಾರೆ 
ಕೊಡಿಗೇನಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಮೆಕ್ಕೆಜೋಳ ಬಿತ್ತನೆಯಲ್ಲಿ ತೊಡಗಿದ್ದಾರೆ    

ಕೊಡಿಗೇನಹಳ್ಳಿ: ಎರಡು ತಿಂಗಳ ನಂತರ ಈ ಭಾಗದಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗೆ ಜೀವ ಬಂದಂತಾಗಿದೆ. ರೈತರು ಉಳುಮೆ ಜತೆಗೆ ಬಿತ್ತನೆಯಲ್ಲಿ ತೊಡಗಿದ್ದಾರೆ.

ಈ ಭಾಗ ಮಳೆಯಾಶ್ರಿತ ಪ್ರದೇಶವಾಗಿರುವ ಕಾರಣ ಇಲ್ಲಿ ಮೆಕ್ಕಜೋಳ, ಶೇಂಗಾ, ರಾಗಿ, ಸಿರಿಧಾನ್ಯಗಳ ಜೊತೆಗೆ ಅವರೆ, ಅಲಸಂದಿ, ತೊಗರಿ ಬೆಳೆಯುತ್ತಾರೆ. ಈ ಬಾರಿ ಮುಂಗಾರಿನಲ್ಲಿ ಮಳೆ ಸಕಾಲಕ್ಕೆ ಬಾರದೆ ಎರಡು ತಿಂಗಳ ನಂತರ ಮಳೆ ಬಿದ್ದಿರುವುದರಿಂದ ಈಗಷ್ಟೇ ಬಿತ್ತನೆ ಆರಂಭವಾಗಿದೆ. ಮುಂದೆ ಮುಂಗಾರು ಜೊತೆಗೆ ಹಿಂಗಾರಿನಲ್ಲಿ ಮಳೆಯಾದರೆ ಮಾತ್ರ ಇಲ್ಲಿ ಬೆಳೆ ಕಾಣಬಹುದು ಇಲ್ಲವಾದರೆ ಜಾನುವಾರುಗಳಿಗೆ ಮೇವು ದೊರಕುವುದು ಕಷ್ಟಕರವಾಗಲಿದೆ ಎನ್ನುತ್ತಾರೆ ಇಲ್ಲಿನ ರೈತರು.

ಕೂಲಿಯಾಳುಗಳಿಗೆ ಬೇಡಿಕೆ: ಎರಡು ತಿಂಗಳಿನಿಂದ ಮಳೆ ಕೈಕೊಟ್ಟಿದ್ದರಿಂದ ರೈತರು ಅವರ ಜಮೀನುಗಳನ್ನು ಉಳುಮೆ ಮಾಡಿಸಲು ಕೂಡ ಸಾಧ್ಯವಾಗಿರಲಿಲ್ಲ. ಈಗ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ, ಟ್ರ್ಯಾಕ್ಟರ್ ಮತ್ತು ಕೂಲಿಯಾಳುಗಳಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಬಿತ್ತನೆ ಮಾಡಿದರೂ ಕೂಡ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಮುಂದೆ ಮುಂಗಾರಿನ ಜೊತೆಗೆ ಹಿಂಗಾರಿನಲ್ಲಾದರೂ ಉತ್ತಮ ಮಳೆಯಾಗಲಿದೆ ಎನ್ನುವ ಭರವಸೆ ಹವಮಾನ ಇಲಾಖೆ ನೀಡಿರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ರೈತರು ದೈರ್ಯವಾಗಿ ತೊಡಗಿಸಿಕೊಳ್ಳಬಹುದು ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.