ತಿಪ್ಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಅರಳಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಇಫ್ಕೋ ಸಂಸ್ಥೆ ಸಹಯೋಗದೊಂದಿಗೆ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ರಾಗಿ ಬೆಳೆಗೆ ಡ್ರೋನ್ ಬಳಸಿ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಸದುದ್ದೇಶದಿಂದ ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದರು.
ಆಹಾರ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಯೋಜನೆ ಮುಖ್ಯ ಗುರಿ. ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಕೃಷಿ ಕಾರ್ಮಿಕರ ಕೊರತೆ ಇಂದಿನ ದಿನಗಳಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ. ಸಸ್ಯ ಪೋಷಕಾಂಶಗಳು ಮತ್ತು ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಿಂಪರಣೆ ಮಾಡಲು ಹೆಚ್ಚು ಸಮಯ ಮತ್ತು ಹಣ ವ್ಯಯವಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಡ್ರೋನ್ ಬಳಸಿ ಸಿಂಪಡಣೆ ಮಾಡುವುದು ಉತ್ತಮ ಮಾರ್ಗ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಪಿ.ಪವನ್ ಮಾತನಾಡಿ, ತಾಲ್ಲೂಕಿನ 400 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಗೆ ಈ ಪ್ರಾತ್ಯಕ್ಷಿಕೆ ನಡೆಸಲಾಗಿದೆ ಎಂದರು.
ವ್ಯವಸಾಯದಲ್ಲಿ ಯೂರಿಯಾದ ಅತಿಯಾದ ಬಳಕೆಯು ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ನ್ಯಾನೋ ಯೂರಿಯಾ ಸಿಂಪಡಣೆಯು ಈ ಸಮಸ್ಯೆಗಳಿಗೆ ಪರಿಹಾರವಾಗಿದೆ. ನ್ಯಾನೋ ಯೂರಿಯಾವನ್ನು ಎರಡರಿಂದ ನಾಲ್ಕು ಮಿಲಿ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಎರಡು ಹಂತಗಳಲ್ಲಿ ಸಿಂಪಡಣೆ ಮಾಡಬೇಕು ಎಂದರು.
ಪ್ರಗತಿಪರ ರೈತ ರೇಣುಕಾಮೂರ್ತಿ ಭದ್ರಾಪುರ ಮಾತನಾಡಿ, ಡ್ರೋನ್ ಬಳಸಿ ನ್ಯಾನೋ ಯೂರಿಯಾ ತಂತ್ರಜ್ಞಾನ ರೈತರು ಅಳವಡಿಸಿಕೊಂಡರೆ ಕಾರ್ಮಿಕ ಸಮಸ್ಯೆ ಮತ್ತು ಖರ್ಚು ಕಡಿಮೆಯಾಗಿ ಉತ್ತಮ ಆದಾಯ ಗಳಿಸಬಹುದು ಎಂದರು.
ಅರಳಗುಪ್ಪೆ ಗ್ರಾಮಪಂಚಾಯಿತಿ ಅಧ್ಯಕ್ಷ ಸುಜಾತ, ಸದಸ್ಯರಾದ ಮಂಜುಳ ಮತ್ತು ಮುನಿಸ್ವಾಮಿ, ಕೃಷಿ ಅಧಿಕಾರಿ ವಿನುತಾ.ಟಿ.ಎಸ್, ಆತ್ಮ ಯೋಜನೆ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಮಹೇಶ್ ಮತ್ತು ಇತರ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.