ADVERTISEMENT

ಎನ್ಇಪಿಯಿಂದ ಶಿಕ್ಷಣದ ವ್ಯಾಪಾರೀಕರಣ: ಪರಿಸರವಾದಿ ಸಿ.ಯತಿರಾಜು

ಎಐಡಿಎಸ್ಒ ಪ್ರತಿನಿಧಿ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 14:51 IST
Last Updated 2 ಸೆಪ್ಟೆಂಬರ್ 2023, 14:51 IST
ಪರಿಸರವಾದಿ ಸಿ.ಯತಿರಾಜು ಮಾತನಾಡಿದರು
ಪರಿಸರವಾದಿ ಸಿ.ಯತಿರಾಜು ಮಾತನಾಡಿದರು   

ತುಮಕೂರು: ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಜೀವನದ ಮೌಲ್ಯಗಳನ್ನು ಬಿತ್ತುವುದರ ಬದಲಾಗಿ ಕೇವಲ ಕೌಶಲಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದು ಶಿಕ್ಷಣದ ನೈಜ ಉದ್ದೇಶವನ್ನೇ ಮರೆಮಾಚುತ್ತಿದೆ ಎಂದು ಪರಿಸರವಾದಿ ಸಿ.ಯತಿರಾಜು ಟೀಕಿಸಿದರು.

ನಗರ ಹೊರ ವಲಯದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶನಿವಾರ ಎಐಡಿಎಸ್ಒ 8ನೇ ರಾಜ್ಯ ಮಟ್ಟದ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಪ್ರತಿನಿಧಿ ಅಧಿವೇಶನದಲ್ಲಿ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಕುರಿತು ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎನ್‌ಇಪಿ ನೀತಿಯು ಶಿಕ್ಷಣವನ್ನು ಸಂಪೂರ್ಣವಾಗಿ ಕೇಂದ್ರೀಕರಣಗೊಳಿಸುವ ದುರುದ್ದೇಶ ಹೊಂದಿದೆ. ಇದು ಆತಂಕಕಾರಿ ಬೆಳವಣಿಗೆ. ಕೇಂದ್ರವು ಕೋವಿಡ್‌ ನೆಪವೊಡ್ಡಿ ಕಲಿಕೆಯ ನಷ್ಟವನ್ನು ಭರಿಸಲು ಆನ್‌ಲೈನ್ ಶಿಕ್ಷಣ ನೀಡುವ ಕುತಂತ್ರ ಹೂಡುತ್ತಿದೆ. ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಎಐಡಿಎಸ್ಒ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್.ಅಶ್ವಿನಿ, ‘ಶಿಕ್ಷಣವು ಮಾನವನ ಚಾರಿತ್ರ್ಯ ನಿರ್ಮಾಣ ಮಾಡುವ ಪ್ರಕ್ರಿಯೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಶಿಕ್ಷಣಕ್ಕಾಗಿ ಜೀವನ ಪರ್ಯಂತ ಹೋರಾಟ ನಡೆಸಿದ ಮಹನೀಯರು ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎಂಬ ಆಶಯ ಹೊಂದಿದ್ದರು. ಆದರೆ ಎನ್‌ಇಪಿ ಮೂಲಕ ಶಿಕ್ಷಣವನ್ನು ವ್ಯಾಪಾರೀಕರಣ ಗೊಳಿಸಲಾಗುತ್ತಿದೆ. ಶಿಕ್ಷಣವನ್ನು ಕೇವಲ ಉಳ್ಳವರ ಪಾಲಾಗಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರಜಾತಾಂತ್ರಿಕ, ವೈಜ್ಞಾನಿಕ, ಧರ್ಮ ನಿರಪೇಕ್ಷ ಶಿಕ್ಷಣ ದೊರೆಯಬೇಕು ಎಂಬುವುದು ಭಗತ್ ಸಿಂಗ್, ನೇತಾಜಿ ಕನಸಾಗಿತ್ತು. ಸಾರ್ವಜನಿಕ ಶಿಕ್ಷಣ ಉಳಿಸುವ ಘೋಷಣೆಯೊಂದಿಗೆ ಕ್ರಾಂತಿಕಾರಿಗಳ ಕನಸು ನನಸಾಗಿಸುವ ಸಂಕಲ್ಪ ತೊಟ್ಟು, ಬಲಿಷ್ಠ ಹೋರಾಟ ಮುಂದುವರಿಸಬೇಕು ಎಂದರು.

ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್‌ಕಾಮತ್, ಖಜಾಂಚಿ ಅಭಯಾ ದಿವಾಕರ್‌, ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ತುಮಕೂರು ಹೊರ ವಲಯದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶನಿವಾರ ಎಐಡಿಎಸ್ಒ 8ನೇ ರಾಜ್ಯ ಮಟ್ಟದ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಪ್ರತಿನಿಧಿ ಅಧಿವೇಶನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.