ಗುಬ್ಬಿಯಲ್ಲಿ ಲಿಂಕ್ ಕೆನಾಲ್ ಹೋರಾಟಗಾರರು ಸಭೆ ನೆಡಸಿದರು
ಗುಬ್ಬಿ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ತಾಲ್ಲೂಕಿನ ಸುಂಕಾಪುರದ ಬಳಿ ಶನಿವಾರ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ತಾಲ್ಲೂಕು ಆಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು ದೂರಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ತುರ್ತುಸಭೆಯಲ್ಲಿ ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.
ಶಾಂತಿಯುತ ಪ್ರತಿಭಟನೆಗೆ ಕಾನೂನಿನಲ್ಲಿ ಅವಕಾಶ ಇದ್ದರೂ ಪರಿಗಣಿಸದ ತಾಲ್ಲೂಕು ಆಡಳಿತ ರಾಜಕೀಯ ಶಕ್ತಿಗಳ ಒತ್ತಡಕ್ಕೆ ಮಣಿದು ನಿಷೇಧಾಜ್ಞೆ ಜಾರಿಗೊಳಿಸಿದೆ. ತಾಲ್ಲೂಕಿನ ಜನತೆ ಪ್ರತಿಭಟನೆಯ ಮೂಲಕ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಮುಖಂಡ ಬಿ.ಎಸ್. ನಾಗರಾಜು ಮಾತನಾಡಿ, ತಾಲ್ಲೂಕಿನ ಜನರ ಹಿತಾಸಕ್ತಿ ಕಡೆಗಣಿಸಿರುವ ಶಾಸಕರು ಪ್ರತಿಭಟನೆ ತಡೆಯಲು ಮುಂದಾಗಿದ್ದು, ತಾಲ್ಲೂಕು ಆಡಳಿತವನ್ನು ಕೈಗೊಂಬೆಯನ್ನಾಗಿಸಿಕೊಂಡು ನಿಷೇಧಾಜ್ಞೆ ಜಾರಿಗೊಳಿಸುವ ಮೂಲಕ ಮರಣ ಶಾಸನಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರೈತ ಸಂಘವನ್ನು ‘ಅಕ್ರಮ ಕೂಟ’ ಎಂದು ತಾಲ್ಲೂಕು ದಂಡಾಧಿಕಾರಿ ಕರೆದಿರುವುದು ಖಂಡನೀಯ. ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನೆಡಸುವುದು ತಪ್ಪೇ? ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ತಾಲ್ಲೂಕಿನ ಜನತೆಯ ಹಿತ ದೃಷ್ಟಿಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವುದು ತರವಲ್ಲ ಎಂದರು.
ಲಿಂಕ್ ಕೆನಾಲ್ ವಿರುದ್ಧ ಹೋರಾಟ ನೆಡಸುತ್ತಿರುವ ರೈತರ ವಿರುದ್ಧ ಯಾವುದೇ ಪ್ರಕರಣದ ದಾಖಲಾದಲ್ಲಿ ಗುಬ್ಬಿ ವಕೀಲರು ಉಚಿತವಾಗಿ ಕೇಸುಗಳನ್ನು ನೆಡಸಿಕೊಡಲು ಸಿದ್ದರಾಗಿದ್ದೇವೆ. ಹೋರಾಟಗಾರರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ವಕೀಲರು ಭರವಡೆ ನೀಡಿದರು.
ಭೈರಪ್ಪ, ಬ್ಯಾಟರಂಗೇಗೌಡ, ಚಂದ್ರಶೇಖರ ಬಾಬು, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮಯ್ಯ ಹಾಗೂ ರೈತ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.