ಕೊಡಿಗೇನಹಳ್ಳಿ: ಮೂಡಲಪಾಯ ಯಕ್ಷಗಾನ ಇತ್ತೀಚಿನ ವರ್ಷಗಳಲ್ಲಿ ಮರೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ನರಸೇಗೌಡ ಅವರು ಶಿಕ್ಷಕ ವೃತ್ತಿ ಜತೆಗೆ ಮೂಡಲಪಾಯ ಯಕ್ಷಗಾನಕ್ಕೆ ಜೀವ ತುಂಬುತ್ತಿದ್ದಾರೆ.
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದ ದೊಡ್ಡನರಸಪ್ಪ ಹಾಗೂ ಈರಮ್ಮ ದಂಪತಿಯ ತೃತಿಯ ಪುತ್ರ ನರಸೇಗೌಡ ಬಾಲ್ಯದಿಂದಲೇ ಯಕ್ಷಗಾನ ಕಲೆಗೆ ಆಕರ್ಷಿತರಾದವರು. ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲಿಯೇ ಮುಗಿಸಿ, ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಮಿಡಿಗೇಶಿಯಲ್ಲಿ ಪಡೆದುಕೊಂಡು, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿಕ್ಷಕ ತರಬೇತಿ ಪಡೆದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಐಚ್ಚಿಕ ವಿಷಯದಲ್ಲಿ ಪದವಿ ಪಡೆದು, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಹೀಗಿರುವಾಗ ಪಿಎಚ್‌ಡಿ ಸಂಶೋಧನಾರ್ಥಿ ವಿರೂಪಾಕ್ಷಪ್ಪ ಎಂಬುವರು ಇವರ ಬಳಿ ಕ್ಷೇತ್ರ ಭೇಟಿಗೆ ಬಂದಾಗ ಅವರಿಗೆ ತಮ್ಮ ಭಾಗದಲ್ಲಿನ ಮೂಡಲಪಾಯ ಯಕ್ಷಗಾನದ ಬಗ್ಗೆ ತಿಳಿಸಿದ್ದಾರೆ.
ಹುಟ್ಟೂರಿನಲ್ಲಿ 1980-90ರ ದಶಕದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಯಕ್ಷಗಾನ ಇವರಿಗೆ ಕಲೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರಕಿಸಿಕೊಟ್ಟವು. ಸ್ವಗ್ರಾಮದ ಭಾಗವತರಾಗಿದ್ದ ಈಡಿಗರ ಕರಿಯಣ್ಣ ಅವರ ಕರೆಗೆ ಓಗೊಟ್ಟು ತಾಯಿ ಈರಮ್ಮ ಬಾಲ ಪಾತ್ರದಲ್ಲಿ ಅಭಿನಯಿಸಲು ಅನುಮತಿ ನೀಡಿದರು. ನಿರಂತರವಾಗಿ 35 ವರ್ಷಗಳಿಂದಲೂ ಪಾತ್ರ ನಿರ್ವಹಣೆ, ನಿರ್ದೇಶನ, ಭಾಗವತಿಕೆ ಹೀಗೆ ಹಂತ ಹಂತವಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶನಿಪ್ರಭಾವ ಎಂಬ ಪ್ರಸಂಗದಲ್ಲಿ ಜಯ ಎಂಬ ರಾಜಪುತ್ರನ ಪಾತ್ರ ಅಭಿನಯಿಸುತ್ತಲೇ ಇದೇ ಪ್ರಸಂಗದಲ್ಲಿ ಸಖಿ, ಕಾಳಿ, ನಾರದ, ಚಿತ್ರವ್ರತ ಎನ್ನುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಂತರ ದೇವಿ ಮಹಾತ್ಮೆಯಲ್ಲಿ ಶಾರದೆಯಾಗಿ ನಂತರ ರುಕ್ಕಿಣಿ ಪಾತ್ರ ನಿರ್ವಹಿಸುತ್ತಲೇ ಪ್ರಧಾನ ಪಾತ್ರವಾದ ಆದಿಶಕ್ತಿ ಪಾತ್ರದಲ್ಲಿ ಕಳೆದ ಮೂವತ್ತೈದು ವರ್ಷಗಳಿಂದಲೂ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.
ಬೇರೆ ಪ್ರಸಂಗಗಳಲ್ಲಿ ಕುಂತಿ, ದ್ರೌಪದಿ, ಖಯಾದು, ದುರ್ದಂಡಿ ಎನ್ನುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಇದುವರೆಗೂ ಮಹಿಳಾ ಪಾತ್ರಗಳಲ್ಲಿಯೇ ಅಭಿನಯಿಸಿರುವುದು ವಿಶೇಷ.
ಮೂಡಲಪಾಯ ಯಕ್ಷಗಾನ ಪ್ರಸಂಗಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಲೇ ತಾವೇ ಭಾಗವತರಾಗಿ ಶನಿಪ್ರಭಾವ ಹಾಗೂ ದೇವಿಮಹಾತ್ಮೆ ಪ್ರಸಂಗಗಳನ್ನು ನಡೆಸಿಕೊಡುತ್ತಾ, ಹೊಸಕೋಟೆ ಈರಮಾಳಪ್ಪನವರಿಂದ ಭಕ್ತಪ್ರಹ್ಲಾದೆ ಪ್ರಸಂಗದ ಸಂಗೀತ ಕಲಿತು ರಂಗದಲ್ಲಿ ಪ್ರಯೋಗಕ್ಕೆ ತಂದಿದ್ದಾರೆ.
ರಾಜ ವಿಕ್ರಮ, ಸಹಸ್ರಕಂಠರಾವಣ ಎನ್ನುವ ಪ್ರಸಂಗಗಳನ್ನು ಈಗಲೂ ನಡೆಸಿಕೊಡುತ್ತಿದ್ದಾರೆ. ಕಲಾವಿದರನ್ನು ಸಂಘಟಿಸಿ ದೇವಸ್ಥಾನ ಹಾಗೂ ನಾಡಿನ ಹಲವಾರು ಕಡೆ ಆಟದ ಪ್ರದರ್ಶನ ನೀಡಿದ್ದಾರೆ.
ಬೀದರ್‌ನಲ್ಲಿ ಗೊ.ರು.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಜನಪದ ಸಮ್ಮೇಳನದಲ್ಲಿ ಆಟ ಪ್ರದರ್ಶಿಸಿದ್ದಾರೆ. ಕರಾವಳಿಯ ಕಟೀಲು ಮೇಳದಲ್ಲೂ ಅಭಿನಯಿಸಿದ್ದಾರೆ. ಮಡಕಸಿರಾ ಪ್ರಾಂತ್ಯದ ತೆಲುಗು ಭಾಷಿಕ ನೆಲೆಯಲ್ಲೂ ಕೂಡ ಹಲವು ಹಳ್ಳಿಗಳಲ್ಲಿ ದೇವಿ ಮಹಾತ್ಮ, ಶನಿಮಹಾತ್ಮಗಳನ್ನು ಅಲ್ಲಿನ ಕಲಾವಿದರಿಗೆ ಕಲಿಸಿ ಸೈ ಎನಿಸಿಕೊಂಡಿದ್ದಾರೆ.
ಭಾಗವತಿಕೆ ಜೊತೆಗೆ ಭಜನೆ, ತತ್ವಪದ ಹಾಡುತ್ತಾರೆ. ಅಲ್ಲದೆ ಕನ್ನಡ ತೆಲುಗು ಭಾಷೆಯ ಕೋಲಾಟದ ಪದಗಳನ್ನು ಹಾಡುತ್ತಾರೆ. ವೀರಗಾಸೆ ಕುಣಿತವನ್ನೂ ಕರಗತ ಮಾಡಿಕೊಂಡಿದ್ದಾರೆ. 70ಕ್ಕೂ ಹೆಚ್ಚು ಕೋಲಾಟದ ಪದ ಸಂಗ್ರಹಿಸಿದ್ದಾರೆ.
ಶ್ರಾವಣದಲ್ಲಿ ಶನಿಮಹಾತ್ಮ ಯಕ್ಷಗಾನ ಕಾವ್ಯವನ್ನು, ನವರಾತ್ರಿ ವೇಳೆ ದೇವಿ ಮಹಾತ್ಮೆ ಕಥಾಭಾಗವನ್ನು ಪಠಣ ಮಾಡಲು ಬೇರೆ ಬೇರೆ ಗ್ರಾಮಗಳ ಭಕ್ತಾದಿಗಳ ಮನೆಗೆ ಹೋಗುತ್ತಾರೆ. ಕಲಾ ಸಾಧನೆ ಗುರುತಿಸಿದ ಕನ್ನಡ ಜಾನಪದ ಪರಿಷತ್ತು ರಾಜ್ಯ ಮಟ್ಟದ ಮಧುರ ಚೆನ್ನ ಪ್ರಶಸ್ತಿ ನೀಡಿದೆ. ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ತಾಲ್ಲೂಕು ಸುವರ್ಣ ಕರ್ನಾಟಕ ಪ್ರಶಸ್ತಿ, ತಾಲ್ಲೂಕು ಪತ್ರಕರ್ತರ ಸಂಘ, ಸರ್ಕಾರಿ ನೌಕರರ ಸಂಘ ಇನ್ನಿತರೆ ಸಂಘ ಸಂಸ್ಥೆಗಳು ಗೌರವಿಸಿವೆ. ಭಾಗವತಿಕೆ ಕಲೆಯನ್ನು ಜೀವಂತವಾಗಿಡಬೇಕೆಂಬ ಉತ್ಕಟ ಬಯಕೆ ನನ್ನದಾಗಿದೆ ಎನ್ನುತ್ತಾರೆ ಶಿಕ್ಷಕ ನರಸೇಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.