ADVERTISEMENT

ಸತ್ಯ ಹೇಳಿದರೆ ದೇಶದ್ರೋಹಿ ಪಟ್ಟ: ಸಾಹಿತಿ ಕುಂ.ವೀರಭದ್ರಪ್ಪ

ಸ್ವಾಮೀಜಿಗಳ ಕಾಲಿಗೆ ಬೀಳುವ ರಾಜಕಾರಣಿಗಳು ಮೂರ್ಖರು

​ಪ್ರಜಾವಾಣಿ ವಾರ್ತೆ
Published 15 ಮೇ 2022, 20:30 IST
Last Updated 15 ಮೇ 2022, 20:30 IST
ಸಾಹಿತಿ ಕುಂ.ವೀರಭದ್ರಪ್ಪ
ಸಾಹಿತಿ ಕುಂ.ವೀರಭದ್ರಪ್ಪ    

ತುಮಕೂರು:‘ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳ ತಪ್ಪಿನ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ. ಇಂದು ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದಿನ ದಿನಗಳು ಇನ್ನಷ್ಟು ಕಷ್ಟಕರವಾಗಲಿವೆ’ ಎಂದು ಸಾಹಿತಿ ಕುಂ.ವೀರಭದ್ರ‍ಪ್ಪ ಅಭಿಪ್ರಾಯಪಟ್ಟರು.

‘ಸತ್ಯ ಹೇಳಿದ ಕಾರಣಕ್ಕೆ ಸಂಶೋಧಕ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಯಿತು. ಉತ್ತಮ ಕಾರ್ಯ, ಭಾವೈಕ್ಯ, ಸಮಾನತೆ, ಸಹಬಾಳ್ವೆಗೆ ಜೀವ ಕೊಟ್ಟರೆ ಅದು ನಿಜವಾಗಲೂ ಸಾರ್ಥಕ’ ಎಂದರು.

ನಗರದಲ್ಲಿ ಭಾನುವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ (ಕೆಜೆವಿಎಸ್) ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಪ್ರಸ್ತುತ ದಿನಗಳಲ್ಲಿ ದೇವರು, ಮೂಢನಂಬಿಕೆ ವಿರುದ್ಧ ಮಾತನಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ್ರೋಹಿ ಪಟ್ಟ ಕಟ್ಟುತ್ತಾರೆ. ನೀವು ಹಿಂದೂ ವಿರೋಧಿಗಳು, ನಿಮ್ಮನ್ನು ಕೊಲೆ ಮಾಡಲಾಗುತ್ತದೆ ಎಂದು ನನಗೂ ಎರಡು ಪ್ರೇಮಪತ್ರಗಳು (ಜೀವ ಬೆದರಿಕೆ ಪತ್ರ) ಬಂದಿದ್ದವು’ ಎಂದು ಹೇಳಿದರು.

‘ಸ್ವಾಮಿಗಳು ಅತ್ಯಂತ ಭಯಾನಕ. ಸಮಾಜದಲ್ಲಿ ಈಗ ಹೈಟೆಕ್ ಸ್ವಾಮಿಗಳ ಸಂಖ್ಯೆ ಹೆಚ್ಚಾಗಿದೆ. ಅಂಥವರ ಕಾಲಿಗೆ ಬೀಳುವ ರಾಜಕಾರಣಿಗಳಿಗಿಂತ ಮೂರ್ಖರು ಬೇರೆ ಯಾರೂ ಇಲ್ಲ. ರಾಜಕಾರಣಿಗಳು ವೈಚಾರಿಕತೆಯ ಪುಸ್ತಕಗಳಿಗಿಂತ ವಾಸ್ತುಶಾಸ್ತ್ರ, ವಾಮಾಚಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾರೆ’ ಎಂದು ಅವರು ತರಾಟೆಗೆ ತೆಗೆದುಕೊಂಡರು.

‘ವಿರೋಧ ಪಕ್ಷದವರ ಬಾಯಿ ಮುಚ್ಚಿಸುವುದು ಹೇಗೆ? ಅವರನ್ನು ಚುನಾವಣೆಯಲ್ಲಿ ಸೋಲಿಸುವುದು ಹೇಗೆ? ಎನ್ನುವುದಕ್ಕೂ ರಾಜಕಾರಣಿಗಳು ಹೋಮ, ಹವನ ಮಾಡಿಸುತ್ತಿದ್ದಾರೆ. ವೈಜ್ಞಾನಿಕ ದೃಷ್ಟಿಕೋನವುಳ್ಳ ರಾಜಕಾರಣಿಗಳ ಅವಶ್ಯಕತೆಯಿದೆ‌. ಶಿಕ್ಷಣವಂತರೇ ಮೂಢನಂಬಿಕೆಗಳನ್ನು ಹೆಚ್ಚಾಗಿ ನಂಬುತ್ತಾರೆ’ ಎಂದು ಕುಂ.ವೀ ವಿಷಾದಿಸಿದರು.

‘ಪುರೋಹಿತರು ನಮ್ಮನ್ನು ಭಯಾನಕ ಪರಿಸ್ಥಿತಿಯಲ್ಲಿ ಇಟ್ಟಿದ್ದಾರೆ. ಮೂಢನಂಬಿಕೆ ಬೇರೂರಿದೆ. ಮಕ್ಕಳಿಗೆ ಹೆಸರಿಡುವ ಸ್ವಾತಂತ್ರ್ಯವೂ ನಮಗಿಲ್ಲ. ಮಕ್ಕಳನ್ನು ಭಯದಲ್ಲಿ ಬೆಳೆಸುತ್ತಿದ್ದೇವೆ. ಅವರಲ್ಲಿ ಪ್ರಶ್ನಿಸುವ ಮನೋಭಾವ ರೂಢಿಸಬೇಕಿದೆ’ ಎಂದು ಸಲಹೆ ಮಾಡಿದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.