ADVERTISEMENT

ಗುಬ್ಬಿ | ನರೇಗಾ ಕೂಲಿ ಹೆಚ್ಚಳಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 8:00 IST
Last Updated 29 ಫೆಬ್ರುವರಿ 2024, 8:00 IST

ಗುಬ್ಬಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಕೆಲಸಗಾರರಿಗೆ ನೀಡುತ್ತಿರುವ ಕೂಲಿ ಕಡಿಮೆ ಇರುವುದರಿಂದ ನರೇಗಾ ಯೋಜನೆ ಕಾಮಗಾರಿಗಳು ಕುಂಠಿತಗೊಳ್ಳುತ್ತಿವೆ ಎಂದು ಎಂ.ಎನ್. ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದರಾಮಣ್ಣ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ದಿನಕ್ಕೆ ₹316 ಕೂಲಿ ನಿಗದಿಗೊಳಿಸಲಾಗಿದೆ. ಆದರೆ ತಾಲ್ಲೂಕಿನಲ್ಲಿ ರೈತರ ಜಮೀನುಗಳಿಗೆ ಕೂಲಿ ಕೆಲಸಕ್ಕೆ ಹೋದರೆ ದಿನಕ್ಕೆ ₹600ರಿಂದ ₹700 ರವರೆಗೆ ಕೂಲಿ ನೀಡುತ್ತಿರುವುದರಿಂದ ನರೇಗಾ ಕಾಮಗಾರಿಗೆ ಕೂಲಿಗಳು ಸಿಗುತ್ತಿಲ್ಲ ಎಂದರು.

ಗುತ್ತಿಗೆದಾರ ಕಲ್ಲೇಶ್ ಮಾತನಾಡಿ, ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಿಸಿದರೆ ವ್ಯವಸ್ಥಿತವಾಗಿ ಅನುದಾನ ಬಿಡುಗಡೆಯಾಗದೆ ಆಳುಗಳಿಗೆ ಕೂಲಿ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಕೆಲಸ ಮುಗಿದು ಮೂರು ತಿಂಗಳಾದರೂ ಅನುದಾನ ಬಿಡುಗಡೆಯಾಗದೆ ಗುತ್ತಿಗೆದಾರರು ಕೈಯಿಂದ ಹಣ ನೀಡಬೇಕಾದ ಸ್ಥಿತಿ ಇದೆ ಎಂದು ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ರವೀಶ್ ಕುಮಾರ್ ಮಾತನಾಡಿ, ಸರ್ಕಾರ ನರೇಗಾ ಯೋಜನೆಗೆ ಅಗತ್ಯ ಅನುದಾನವನ್ನು ವ್ಯವಸ್ಥಿತವಾಗಿ ಬಿಡುಗಡೆಗೊಳಿಸದೆ ಯಾವುದೇ ಕಾಮಗಾರಿಗಳನ್ನು ಮಾಡಿದರೂ ಹಣ ನೀಡುತ್ತಿಲ್ಲ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ, ರೈತ ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.